ಮೀನುಗಾರರ ನಾಪತ್ತೆ: ಉತ್ತರ ಕನ್ನಡದಲ್ಲಿ ಹೋರಾಟಕ್ಕೆ ಸಜ್ಜು

Update: 2019-01-19 16:36 GMT

ಉಡುಪಿ, ಜ.19: ಕಳೆದ 35 ದಿನಗಳಿಂದ ನಾಪತ್ತೆಯಾಗಿರುವ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಈವರೆಗೆ ಪತ್ತೆ ಹಚ್ಚದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಮಲ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಉತ್ತರ ಕನ್ನಡ ಜಿಲ್ಲಾ ಮಟ್ಟದಲ್ಲಿ ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ.

ನಾಪತ್ತೆಯಾಗಿರುವ ಭಟ್ಕಳ, ಹೊನ್ನಾವರ, ಕುಮಟಾಗಳ ಐವರು ಮೀನು ಗಾರರ ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸರಕಾರ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡದೆ ನಮಗೆ ಜನರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಪತ್ರಿಕೆಗೆ ತಿಳಿಸಿದ್ದಾರೆ.

ಆಡಳಿತ ವ್ಯವಸ್ಥೆಗೆ ನಾವು ಒತ್ತಡ ಹಾಕುತ್ತಿದ್ದೇವೆ. ಈ ಬಗ್ಗೆ ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು. ನಾಪತ್ತೆಯಾಗಿರುವವರನ್ನು ವಾರದೊಳಗೆ ಪತ್ತೆ ಹಚ್ಚದಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಈ ಕುರಿತು ಸದ್ಯವೇ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದು ಅವರು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಐದು ಮಂದಿ ಮೀನುಗಾರರು ನಾಪತ್ತೆಯಾಗಿ 35 ದಿನಗಳಾದರೂ ಕೇಂದ್ರ ಸಚಿವ ಹಾಗೂ ಕಾರವಾರ ಸಂಸದ ಅನಂತ ಕುಮಾರ್ ಹೆಗಡೆ ಈವರೆಗೆ ಮೀನುಗಾರರ ಮನೆಗೆ ಭೇಟಿ ನೀಡಿಲ್ಲ. ಇದೀಗ ಅವರನ್ನು ಸಂಪರ್ಕಿಸಿದಾಗ ನಾಳೆ ಮನೆಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ ಎಂದು ಗಣಪತಿ ಮಾಂಗ್ರೆ ತಿಳಿಸಿದ್ದಾರೆ.

ತಾತ್ಕಾಲಿಕ ಪರಿಹಾರ ಬಿಡುಗಡೆ

ನಾಪತ್ತೆಯಾದ ಮೀನುಗಾರರ ಮನೆಗಳಿಗೆ ಜ.9ರಂದು ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟ ರಾವ್ ನಾಡಗೌಡ ಘೋಷಿಸಿರುವ ತಾತ್ಕಾಲಿಕ ಪರಿಹಾರ ಮೊತ್ತ ಇಂದು ಬಿಡು ಗಡೆಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಪತ್ರಿಕೆಗೆ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಐದು ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಪರಿಹಾರ ಮೊತ್ತವು ಎರಡು ಮೂರು ದಿನಗಳಲ್ಲಿ ಕುಟುಂಬಗಳ ಕೈ ಸೇರಲಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News