ದ.ಕ. ಜಿಲ್ಲೆಯಲ್ಲಿ 921 ಲಸಿಕಾ ಬೂತ್: ಸಿಇಒ ಡಾ.ಸೆಲ್ವಮಣಿ

Update: 2019-01-21 14:09 GMT

ಮಂಗಳೂರು, ಜ.21: ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಬೇಕು. ಪಲ್ಸ್ ಪೊಲಿಯೋ ಅಭಿಯಾನಕ್ಕಾಗಿ ದ.ಕ. ಜಿಲ್ಲೆಯಲ್ಲಿ 921 ಲಸಿಕಾ ಬೂತ್‌ಗಳನ್ನು ತೆರೆಯಲಾಗುವುದು ಎಂದು ಜಿಪಂ ಸಿಇಒ ಡಾ.ಸೆಲ್ವಮಣಿ ಆರ್. ತಿಳಿಸಿದರು.

ಪೋಲಿಯೋ ಮುಕ್ತ ಭಾರತಕ್ಕಾಗಿ ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ರಾಷ್ಟ್ರೀಯ ಲಸಿಕಾ ದಿನ ಕಾರ್ಯಕ್ರಮವನ್ನು ಆಯೋಜಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಜಿಪಂ ಸಿಇಒ ಮಾತನಾಡಿದರು.

ಪಲ್ಸ್ ಪೊಲಿಯೋ ಅಭಿಯಾನಕ್ಕಾಗಿ 921 ಲಸಿಕಾ ಬೂತ್‌ಗಳನ್ನು ತೆರೆಯಲಾಗುವುದು. ಇದರಲ್ಲಿ 26 ಟ್ರಾನ್ಸಿಟ್ ಪಾಂಯಿಟ್ಸ್, 7 ಮೊಬೈಲ್ ತಂಡಗಳಿರುತ್ತವೆ. 190 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, 3,802 ಲಸಿಕೆ ಹಾಕುವ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇಲಾಖೆ ವತಿಯಿಂದ ಈ ಕಾರ್ಯಕ್ರಮದ ನಿರ್ವಹಣೆಗಾಗಿ 1,976 ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ 22,33,702 ಜನಸಂಖ್ಯೆ ಇದ್ದು, 7,83,213 ಮಂದು ನಗರ ಪ್ರದೇಶದಲ್ಲಿ ಹಾಗೂ 14,50,489 ಮಂದಿ ಗ್ರಾಮಾಂತರ ಪ್ರದೇಶದಲ್ಲಿದ್ದಾರೆ. 0-5 ಮಕ್ಕಳು 1,49,562 ಎಂದು ಗುರುತಿಸಲಾಗಿದ್ದು, ನಗರ ಪ್ರದೇಶದಲ್ಲಿ 48,119, ಗ್ರಾಮೀಣ ಪ್ರದೇಶದಲ್ಲಿ 1,01,443 ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದರು.

5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಬೇಕು. ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಬೂತ್ ದಿನದಂದೇ ಎಲ್ಲ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ಬಗ್ಗೆ ಮಾಹಿತಿ ನೀಡಬೇಕು. ಬೂತ್ ದಿನವಲ್ಲದೆ ಉಳಿದ 3 ದಿನಗಳಲ್ಲಿ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಮನೆಮನೆಗೆ ಭೇಟಿ ನೀಡಬೇಕು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಮಕೃಷ್ಣ ರಾವ್, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News