ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಮಂಗಳೂರು, ಜ. 21: ದ.ಕ.ಜಿಲ್ಲಾಡಳಿತ, ದ.ಕ.ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ದ.ಕ-ಉಡುಪಿ ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಲ್ಕಿಯ ನಿಜಶರಣ ಚೌಡಯ್ಯ ಸಮಾಜ ಸೇವಾ ಸಂಘದ ಸಹಕಾರದಲ್ಲಿ ನಗರದ ಕೊಡಿಯಾಲ್‌ಬೈಲ್‌ನ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ‘ಅಂಬಿಗರ ಚೌಡಯ್ಯ ಜಯಂತಿ’ ಜರುಗಿತು.
ಕಾರ್ಯಕ್ರಮದಲ್ಲಿ ಜಯಂತಿಯ ಸಂದೇಶ ನೀಡಿದ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಜಾತಿ, ಕುಲದ ಕುರಿತಂತೆ ಸಮಾಜದಲ್ಲಿದ್ದ ಓರೆಕೋರೆಗಳನ್ನು ತಿದ್ದುವ ಸಲುವಾಗಿ ಅಂಬಿಗರ ಚೌಡಯ್ಯರ ಶ್ರಮ ಅಪಾರ. ಸಮಾನತೆಯ ಸಂದೇಶ ಸಾರಿದ ಅವರು ನಮ್ಮೆಲ್ಲರಿಗೂ ದಾರಿದೀಪ ಎಂದರು.
ಅಂಬಿಗರ ಚೌಡಯ್ಯ ಅನ್ಯಾಯ, ಜಾತೀಯತೆ, ಅಧಾರ್ಮಿಕ ಆಚರಣೆಗಳು ಹಾಗೂ ಡಾಂಭಿಕ ಜನರ ವಿರುದ್ದ ಕಟುವಾಗಿ ಮಾತನಾಡುತ್ತಿದ್ದ ಕ್ರಾಂತಿಕಾರಿ ವಚನಕಾರರಾಗಿದ್ದರು ಎಂದ ಶರಭೇಂದ್ರ ಸ್ವಾಮಿ, ಅನುಭವ ಮಂಟಪದ ಮೂಲಕ ಸಮಾಜದ ವ್ಯತ್ಯಾಸಗಳನ್ನು ಸರಿಪಡಿಸುವ ಕಾರ್ಯ ನಡೆಸಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸಾಧಕರ ಅನುಭವಗಳನ್ನು ತಿಳಿದುಕೊಳ್ಳುವ ಮೂಲಕ ಜೀವನವನ್ನು ಪಾವನಗೊಳಿಸಬೇಕು. ಅಂಬಿಗರ ಚೌಡಯ್ಯ ನಿರ್ದಿಷ್ಟ ಸಮಾಜಕ್ಕೆ ಸೇರಿದವರು ಎಂದು ಪರಿಗಣಿಸದೆ ಅವರ ಸಂದೇಶ ಎಲ್ಲರಿಗೂ ಅನ್ವಯ ಎಂದು ಭಾವಿಸಿ ಜೀವನದಲ್ಲಿ ಅದನ್ನು ಅಳವಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಮಂಗಳೂರು ತಹಶೀಲ್ದಾರ್ ಟಿ.ಜಿ.ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಹಾಗೂ ಉಡುಪಿ ಮೊಗವೀರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷ ಕೇಶವ ಸಾಲ್ಯಾನ್, ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭು ಅಲ್ಲೂರು, ಕೊಡಿಯಾಲ್‌ಬೈಲ್‌ನ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಫಿಲೋಮಿನಾ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ.ಕ.ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.