ಕೃಷ್ಣಮಠಕ್ಕೆ ಭೇಟಿ ನೀಡಿದ ಮೊದಲ ಲಿಂಗಾಯತ ಮಠಾಧೀಶ ಸಿದ್ಧಗಂಗಾಶ್ರೀ ನಿಧನಕ್ಕೆ ಪೇಜಾವರ, ಪಲಿಮಾರುಶ್ರೀ ಸಂತಾಪ

Update: 2019-01-21 14:53 GMT

ಉಡುಪಿ, ಜ. 21: ಇಂದು ಬೆಳಗ್ಗೆ ಲಿಂಗೈಕ್ಯಗೊಂಡ ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ತುಮಕೂರು ಶ್ರೀಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಗಳು 1969ರ ಡಿಸೆಂಬರ್ ತಿಂಗಳು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಎರಡನೇ ಪರ್ಯಾಯ ಸಂದರ್ಭದಲ್ಲಿ ಉಡುಪಿಯಲ್ಲಿ ನಡೆದ ವಿಎಚ್‌ಪಿಯ ಪ್ರಥಮ ಪ್ರಾಂತ ಸಮ್ಮೇಳನದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಅವರು ಶ್ರೀಕೃಷ್ಣ ಮಠಕ್ಕೂ ಭೇಟಿ ನೀಡಿದ್ದು, ಈ ಮೂಲಕ ಕೃಷ್ಣ ಮಠಕ್ಕೆ ಭೇಟಿ ನೀಡಿದ ಮೊದಲ ಲಿಂಗಾಯತ ಮಠಾಧೀಶರೆನಿಸಿದ್ದರು. 2016-18ರಲ್ಲಿ ಪೇಜಾವರಶ್ರೀಗಳ ದಾಖಲೆಯ ಐದನೇ ಪರ್ಯಾಯ ಸಂದರ್ಭದಲ್ಲಿ ಸಿದ್ಧಗಂಗಾಶ್ರೀಗಳನ್ನು ಉಡುಪಿಗೆ ಕರೆಸಲು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರಯತ್ನಿಸಿದ್ದರೂ ಶ್ರೀಗಳ ವಯಸ್ಸು ಹಾಗೂ ದೈಹಿಕ ಸ್ಥಿತಿಯ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ.

ಸಿದ್ಧಗಂಗಾ ಶ್ರೀಗಳ ನಿಧನಕ್ಕೆ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪೇಜಾವರಶ್ರೀ: ಶ್ರೀಸಿದ್ಧಗಂಗಾ ಸ್ವಾಮೀಜಿಗಳ ಅಗಲುವಿಕೆಯಿಂದ ಸಮಸ್ತ ಕನ್ನಡಿಗರಿಗೆ ಅತ್ಯಂತ ದುಃಖವಾಗಿದೆ. ಸ್ವಾಮೀಜಿಯವರ ಮೇಲೆ ಕನ್ನಡಿಗರಿಗೆ ಎಲ್ಲಿಲ್ಲದ ಅಭಿಮಾನ. ಅವರು ಇನ್ನು ಬದುಕಿರಬೇಕಿತ್ತು ಎಂಬುದು ಎಲ್ಲರ ಆಸೆಯಾಗಿತ್ತು. ಶೈಕ್ಷಣಿಕ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಅದ್ಬುತ. ಎಲ್ಲಾ ಮಠಾಧೀಶರಿಗೂ ಅವರ ಸೇವೆ ಮಾದರಿ. ಲಾಂತರ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ.

ಶ್ರೀಸಿದ್ಧಗಂಗಾ ಸ್ವಾಮೀಜಿಗಳ ಅಗಲುವಿಕೆಯಿಂದ ಸಮಸ್ತ ಕನ್ನಡಿಗರಿಗೆ ಅತ್ಯಂತ ದುಃಖವಾಗಿದೆ. ಸ್ವಾಮೀಜಿಯವರ ಮೇಲೆ ಕನ್ನಡಿಗರಿಗೆ ಎಲ್ಲಿಲ್ಲದ ಅಭಿಮಾನ. ಅವರು ಇನ್ನು ಬದುಕಿರಬೇಕಿತ್ತು ಎಂಬುದು ಎಲ್ಲರ ಆಸೆಯಾಗಿತ್ತು. ಶೈಕ್ಷಣಿಕ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಅದ್ಬುತ. ಎಲ್ಲಾ ಮಠಾಧೀಶರಿಗೂ ಅವರ ಸೇವೆ ಮಾದರಿ. ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಅವರೊಬ್ಬ ಕರ್ಮಯೋಗಿ. ಅವರ ಜೀವನವೇ ಒಂದು ಪವಾಡ. 111 ವರ್ಷ ಬದುಕಿದ್ದೇ ಪವಾಡ. ಸಿದ್ದಗಂಗಾ ಶ್ರೀಗಳ ಜೊತೆ ನನಗೆ ಬಹಳ ವರ್ಷಗಳ ನಿಕಟ ಸಂಪರ್ಕವಿದೆ. ಮೊದಲ ಭಾರಿ ಅವರ ಸಾಧನೆ ಕೇಳಿ ಅಚ್ಚರಿಗೊಂಡಿದ್ದೆ. ನಾನೇ ಹೋಗಿ ಅವರನ್ನು ಭೇಟಿಯಾಗಿದ್ದೆ. ನನ್ನ ಎರಡನೇ ಪರ್ಯಾಯದಲ್ಲಿ ಉಡುಪಿಗೆ ಬಂದು ವಿಶ್ವಹಿಂದೂ ಪರಿಷತ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಲಿಂಗಾಯತ ಮಠಾಧೀಶರೊಬ್ಬರು ಕೃಷ್ಣ ಮಠಕ್ಕೆ ಬಂದದ್ದು ಅದೇ ಮೊದಲು. ನನ್ನ ಮೇಲೆ ವಿಶೇಷ ಪ್ರೀತಿ,ಅಭಿಮಾನ ಅವರಿಗಿತ್ತು. ಅವರು ಅಗಲಿದರೂ ಅವರ ಸೇವೆಯಿಂದ ಕನ್ನಡಿಗರು ಸ್ಪೂರ್ತಿ ಪಡೆಯಬೇಕು.

ಪರ್ಯಾಯ ಪಲಿಮಾರು ಶ್ರೀ: ಶ್ರೀಗಳ ಅಗಲುವಿಕೆ ಇಡೀ ಜಗತ್ತಿಗೆ ಸಂತಾಪ ವುಂಟು ಮಾಡಿದೆ. ಅವರ ಸುದೀರ್ಘ ಬದುಕು ವೈದ್ಯಲೋಕಕ್ಕೂ ಒಂದು ಅಚ್ಚರಿ. ಶ್ರೀಗಳು ಒಬ್ಬ ಅತೀಂದ್ರಿಯ ಶಕ್ತಿಯುಳ್ಳ ವ್ಯಕ್ತಿಯಾಗಿ ಜನರ ಮನಸಲ್ಲಿ ಸದಾಕಾಲ ಉಳಿಯುತ್ತಾರೆ. ವಿದ್ಯಾದಾನ, ಅನ್ನದಾನ, ಆಶ್ರಯ ಕೊಟ್ಟ ಶ್ರೇಷ್ಠ ಸಂನ್ಯಾಸಿ. ಸಿದ್ದಗಂಗಾ ಶ್ರೀಗಳು ಎಲ್ಲರಿಗೂ ಆತ್ಮೀಯರಾಗಿದ್ದರು, ಬೇಕಾದವರಾಗಿದ್ದರು. ಒಂದು ದೊಡ್ಡ ಸಂಪತ್ತನ್ನು ಇಂದು ಸಮಾಜ ಕಳೆದುಕೊಂಡಿದೆ. ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿವೆ, ನೀಡುತ್ತಿವೆ. ಅವರ ಅಗಲುವಿಕೆ ಸಮಾಜಕ್ಕೆ ದೊಡ್ಡ ನಷ್ಟ. ಶಿಷ್ಯವರ್ಗಕ್ಕೆ ಅವರ ಅಗಲುವಿಕೆ ಸಹಿಸಿಕೊಳ್ಳುವ ಶಕ್ತಿ ನೀಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News