ಸ್ವಾಮೀಜಿ ಅವರ ನಿಧನ: ಉಡುಪಿ ಬಿಷಪ್‌, ಜಯಮಾಲಾ, ಕೋಟ ಶ್ರೀನಿವಾಸ ಪೂಜಾರಿ, ಸೊರಕೆ ಸಂತಾಪ

Update: 2019-01-21 14:57 GMT

ಉಡುಪಿ, ಜ.21: ಉಡುಪಿ ಧರ್ಮಪ್ರಾಂತದ ಥರ್ಮಾಧ್ಯಕ್ಷರಾದ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಅಶ್ರುತರ್ಪಣ ಅರ್ಪಿಸಿದ್ದಾರೆ.

ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಧರ್ಮ ಎಂದು ಧರ್ಮಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದ ಮಹಾತ್ಮ ಡಾ.ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಯಿಂದ ನಮಗೆ ಅತೀವ ದುಃಖವಾಗಿದೆ. ನಡೆದಾಡುವ ದೇವರೆಂಬ ಹೆಸರಿನಿಂದ ಭಕ್ತರಿಗೆ ಪ್ರಿಯವಾಗಿದ್ದ ಅವರ ಆತ್ಮ ಭಗವಂತನಲ್ಲಿ ಐಕ್ಯವಾಗಲಿ ಎಂದು ಪ್ರಾರ್ಥಿಸುತ್ತೇವೆ.

ಕರ್ನಾಟಕ ರತ್ನ ಶ್ರೀಶಿವಕುಮಾರ ಸ್ವಾಮಿಗಳು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ಹನ್ನೆರಡನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣ ನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದವರು. ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಅಪಾರ ಕಳಕಳಿಯಿದ್ದ ವರು. ತಮ್ಮ ಮಠದಲ್ಲಿ ಜಾತಿ-ಮತ ಬೇದವಿಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯವಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು. ಪೂಜ್ಯ ಸ್ವಾಮೀಜಿಗಳು ಆರಂಭಿಸಿದ್ದ ದಾಸೋಹ ಕಾರ್ಯ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮುಂದುವರಿಯಲಿ ಎಂದು ಹಾರೈಸುತ್ತೇವೆ.

ಸಚಿವೆ ಜಯಮಾಲಾ ಸಂತಾಪ

ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದ್ದ ಮಹಾನ್ ಚೇತನ, ಮಾನವತಾವಾದಿ ಪರಮಪೂಜ್ಯ ಶ್ರೀಶಿವಕುಮಾರ ಸ್ವಾಮೀಜಿ ಅವರು ಇಂದು ಶಿವೈಕ್ಯರಾಗಿರುವುದು ನಮ್ಮೆಲ್ಲರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶ್ರೀಗಳು ತಮ್ಮ ತಪಸ್ ಶಕ್ತಿಯಿಂದ ಇಂದಿನ ದಿನಮಾನದಲ್ಲಿ ದೈವಶಕ್ತಿ ಹೊಂದಿದ್ದು ಸಮಾಜ ವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಪ್ರೇರಣೆ ನೀಡುತ್ತಿದ್ದರು.

ಆದರೆ ಅವರ ಚಿಂತನೆಗಳಿಗೆ, ಉಪದೇಶಗಳಿಗೆ, ಅವರ ಸೇವೆಗೆ ಎಂದಿಗೂ ಸಾವಿಲ್ಲ. ಅಕ್ಷರ ದಾಸೋಹ, ಅನ್ನದಾಸೋಹ ಮತ್ತು ಜ್ಞಾನ ದಾಸೋಹವನ್ನು ನಿರಂತರವಾಗಿ ಕೈಗೊಂಡು ಇಡೀ ಜಗತ್ತಿಗೆ ಶ್ರೀಗಳು ಗುರುವಾಗಿದ್ದರು. ಸದಾ ಭಕ್ತರಿಗೆ ದಾರಿದೀಪವಾಗಿದ್ದ ಶ್ರೀಗಳು ಶಿವೈಕ್ಯರಾಗಿರುವ ಈ ಸಂದರ್ಭದಲ್ಲಿ ಮತ್ತೊಮ್ಮೆ ಅವರಿಗೆ ಪ್ರಣಾಮಗಳನ್ನು ಸಲ್ಲಿಸಬಯಸುತ್ತೇನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ, ಸೊರಕೆ ಸಂತಾಪ

ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಶ್ರೀಗಳು ಇನ್ನಷ್ಟು ವರ್ಷಗಳ ಕಾಲ ಮಾರ್ಗದರ್ಶನ ಮಾಡುತ್ತಾರೆ ಎಂದುಕೊಂಡಿದ್ದೆ. ಅವರು ನಮ್ಮನ್ನ ಅಗಲಿರುವುದು ದುಃಖ ತಂದಿದೆ. ಶ್ರೀಗಳ ಕಾರ್ಯಸಾಧನೆ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ, 10ಸಾವಿರ ಮಕ್ಕಳಿಗೆ ಊಟದ ಜೊತೆಗೆ ಶಿಕ್ಷಣ ಯಾವುದೇ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಮಾಡಲು ಅಸಾಧ್ಯ. ಭಕ್ತರಿಗೆ ಶ್ರೀಗಳ ಅಗಲುವಿಕೆ ನೋವು ಸಹಿಸುವ ಶಕ್ತಿ ಸಿಗಲಿ. ಶ್ರೀಗಳು ಭಾರತ ರತ್ನಕ್ಕೆ ಅರ್ಹರು. ಭಾರತ ರತ್ನ ಕೊಡುವ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯೋಚನೆ ಮಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಸೊರಕೆ:   ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅವರ ನಿಧನದಿಂದ ನಾಡು ನಡೆದಾಡುವ ದೇವರೆಂದೇ ಖ್ಯಾತರಾದ ಸಂತನನ್ನು ಕಳೆದುಕೊಂಡಿದೆ. ಜಾತಿ, ಧರ್ಮ, ಭಾಷೆಗಳ ಎಲ್ಲೆಯನ್ನು ಮೀರಿ ಶಿಕ್ಷಣ ಹಾಗೂ ಅನ್ನ ದಾಸೋಹ ನಡೆಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News