ಚಿರತೆ ಚರ್ಮ ಮಾರಾಟ ಪ್ರಕರಣ: 10 ಮಂದಿ ಸೆರೆ; ಐವರು ಭಟ್ಕಳದವರು

Update: 2019-01-21 15:49 GMT

ಭಟ್ಕಳ, ಜ. 21: ಅಕ್ರಮವಾಗಿ ಚಿರತೆ ಚರ್ಮವನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ ವೇಳೆ ಬೆಂಗಳೂರು ಸಿಐಡಿ ಅರಣ್ಯ ಘಟಕದಿಂದ ಬಂಧಿತರಾಗಿರುವ 10 ಆರೋಪಿಗಳಲ್ಲಿ ಐವರು ಭಟ್ಕಳದವರು ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಗಳನ್ನು ಜಿಲ್ಲೆಯ ಮುಂಡಗೋಡ ತಾಲೂಕಿನ ಸೂರಜ್ ತಂದೆ ಸಾಮ್ಯಯೆಲ್ (34), ಭಟ್ಕಳ ತಾಲೂಕಿನ ಸಾಗರ ರೋಡ್ ಕಡವಿನಕಟ್ಟೆ ನಿವಾಸಿ ರಘು, ರಂಗೀಕಟ್ಟೆಯ ಮೋಹನ ಜಿ. ನಾಯ್ಕ (24), ಹಾಡುವಳ್ಳಿಯ ನಾಗರಾಜ್ ತಂದೆ ವೆಂಕಟೇಶ ನಾಯ್ಕ, ಬೆಂಗ್ರೆ ಚಿಂಗಾರಮಕ್ಕಿ ನಿವಾಸಿ ಪ್ರವೀಣ್ ರಾಮಾ ದೇವಡಿಗ, ತಾಲೂಕಿನ ಸೋನಾರಕೇರಿಯ ಸುಬ್ರಹ್ಮಣ್ಯ ಸದಾನಂದ ರಾಯ್ಕರ್ (34), ಕುಂದಾಪುರ ತಾಲೂಕಿನ ಬೈಂದೂರು ಮಯ್ಯಾಡಿ ಗ್ರಾಮದ ನಾಗರಾಜ್ ತಂದೆ ಶ್ರೀಧರ್, ಬೈಂದೂರು ತಗ್ಗರ್ಸೆ ಕಂಬಳಗದ್ದೆ ರಸ್ತೆ ನಿವಾಸಿ ಸಂಜೀವ ತಮ್ಮಯ್ಯ ಪೂಜಾರಿ (35), ವಿರೇಂದ್ರ ರಾಮಯ್ಯ ಶೆಟ್ಟಿ (35), ಹೊನ್ನಾವರ ಮಾಗೋಡು ಮೂಲದ ಜಾಸ್ವನ್ ಪೌಲ್ (32) ಎಂದು  ಗುರುತಿಸಲಾಗಿದೆ.

ಸಿಐಡಿ ಅರಣ್ಯ ಘಟಕ ಬೆಂಗಳೂರು ಘಟಕ ಇದರ ಡಿವಾಯ್‍ಎಸ್ಪಿ ಎಸ್.ಎಸ್.ಕಾಶಿ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್‍ಗಳಾದ ಎಚ್.ಕೆ.ರವಿಕುಮಾರ್, ಎಮ್.ಎಸ್.ರಾಮಮೂರ್ತಿ, ಸಿಬ್ಬಂದಿಗಳಾದ ಬಿ.ಎಚ್.ಹೇಮಕುಮಾರ್, ಬಿ.ವಿ.ಪರಮೇಶ್ ಆರೋಪಿಗಳೊಂದಿಗೆ ಗ್ರಾಹಕರ ಸೋಗಿನಲ್ಲಿ ಮಾತನಾಡಿ ವ್ಯವಹಾರ ಕುದುರಿಸಿ ಕುಂದಾಪುರದ ಶಾಸ್ತ್ರೀ ಸರ್ಕಲ್‍ಗೆ ಬರ ಹೇಳಿದ್ದರು.

ಆರೋಪಿಗಳು ಒಂದು ಹೊಂಡಾ ಮೇಜ್ ಮತ್ತು ಮಾರುತಿ 800 ಕಾರಿನಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸುತ್ತಿದ್ದಂತೆಯೇ ಅಧಿಕಾರಿಗಳು ಅವರನ್ನು ಹಿಡಿಯಲು ಮುಂದಾದರು. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರಾದರೂ ಸಫಲರಾಗಿಲ್ಲ ಎಂದು ತಿಳಿದು ಬಂದಿದೆ.

ವಶಪಡಿಸಿಕೊಳ್ಳಲಾದ ಚಿರತೆಯ ಚರ್ಮ ಸುಮಾರು 4 ವರ್ಷ ಪ್ರಾಯದ ಚಿರತೆಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಕುಂದಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಸಿಐಡಿ ಅಧಿಕಾರಿಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ 3 ಪ್ರಕರಣಗಳನ್ನು ದಾಖಲಿಸಿದ್ದು, ಸ್ಥಳೀಯ ಅರಣ್ಯ ಇಲಾಖೆಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News