ಉಡುಪಿ: ಸೋಮವಾರ ಮತ್ತೆ 8 ಮಂಗಗಳ ಕಳೇಬರ ಪತ್ತೆ

Update: 2019-01-21 16:57 GMT

ಉಡುಪಿ, ಜ.21: ಜಿಲ್ಲೆಯ ವಿವಿದೆಡೆಗಳಲ್ಲಿ ಸೋಮವಾರ ಮತ್ತೆ ಎಂಟು ಸತ್ತ ಮಂಗಗಳ ಕಳೇಬರಗಳು ಪತ್ತೆಯಾಗಿವೆ. ಇವುಗಳಲ್ಲಿ ಕೇವಲ ಒಂದು ಮಂಗನ ದೇಹದ ಪೋಸ್ಟ್‌ಮಾರ್ಟಂ ಮಾಡಿ ವಿಸೇರಾವನ್ನು ಕೆಎಫ್‌ಡಿ ವೈರಸ್ ಪರೀಕ್ಷೆಗಾಗಿ ಶಿವಮೊಗ್ಗ ಮತ್ತು ಮಣಿಪಾಲದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಮಂಗನ ಕಾಯಿಲೆಗೆ ಉಡುಪಿ ಜಿಲ್ಲೆಯ ನೋಡಲ್ ಅಧಿಕಾರಿಯಾಗಿರುವ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಇಂದು ಹಳ್ಳಿಹೊಳೆ ಪಿಎಚ್‌ಸಿ ವ್ಯಾಪ್ತಿಯ ಕಮಲಶಿಲೆ, ಸಿದ್ಧಾಪುರದ ಹೊಸಂಗಡಿ, ಶಿರ್ವ, ಬಿದ್ಕಲ್‌ಕಟ್ಟೆಯ ಜಪ್ತಿ, ಬೆಳ್ಮಣ್, ಮಂದಾರ್ತಿಯ ಹೆಗ್ಗುಂಜೆ, ಪೇತ್ರಿಯ ಕುಂಜಾಲು ಹಾಗೂ ಬ್ರಹ್ಮಾವರದ ಹೇರೂರು ಗ್ರಾಮಗಳಲ್ಲಿ ಸತ್ತ ಮಂಗಗಳ ಕಳೇಬರಗಳನ್ನು ಪತ್ತೆಯಾಗಿವೆ ಎಂದು ಅವರು ವಿವರಿಸಿದರು.

ಇವುಗಳಲ್ಲಿ ಪೇತ್ರಿ ಪಿಎಚ್‌ಸಿಯ ಕುಂಜಾಲಿನಲ್ಲಿ ಸಿಕ್ಕಿದ ಮಂಗನ ದೇಹದ ಪೋಸ್ಟ್‌ಮಾರ್ಟಂನ್ನು ನಡೆಸಲಾಗಿದೆ. ಹಳ್ಳಿಹೊಳೆಯ ಕಮಲಶಿಲೆ, ಸಿದ್ಧಾಪುರದ ಹೊಸಂಗಡಿ ಹಾಗೂ ಬ್ರಹ್ಮಾವರದ ಹೇರೂರಿನಲ್ಲಿ ಈಗಾಗಲೇ ಸಿಕ್ಕಿರುವ ಮಂಗನಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವುಗಳ ಪೋಸ್ಟ್ ಮಾರ್ಟಂ ನಡೆಸಲಾಗಿಲ್ಲ.

ಜಪ್ತಿ ಮತ್ತು ಹೆಗ್ಗುಂಜೆಯಲ್ಲಿ ಸಿಕ್ಕಿದ ಕಳೇಬರಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದರೆ, ಶಿರ್ವ ಮತ್ತು ಬೆಳ್ಮಣ್‌ಗಳಲ್ಲಿ ಮಂಗಗಳ ಸಾವಿಗೆ ವಿದ್ಯುತ್ ಸಂಪರ್ಕ ಹಾಗೂ ಅಫಘಾತಗಳು ಕಾರಣವಾಗಿದ್ದವು ಎಂದು ಅವರು ವಿವರಿಸಿದರು.

ಇದರಿಂದ ಈವರೆಗೆ ಜ.8ರ ಬಳಿಕ ಜಿಲ್ಲೆಯಲ್ಲಿ ಸಿಕ್ಕಿದ ಮಂಗಗಳ ಕಳೇಬರಗಳ ಸಂಖ್ಯೆ 51ಕ್ಕೇರಿದೆ. ಇದರಲ್ಲಿ 23 ಮಂಗಗಳ ಪೋಸ್ಟ್‌ಮಾರ್ಟಂ ಮಾಡಲಾಗಿದೆ. ಉಳಿದವುಗಳನ್ನು ಬೇರೆ ಬೇರೆ ಕಾರಣಗಳಿಂದ ಪೋಸ್ಟ್ ಮಾರ್ಟಂ ನಡೆಸಲಾಗಿಲ್ಲ. 23ರಲ್ಲಿ 21ಮಂಗಗಳನ್ನು ಪರೀಕ್ಷೆಗಾಗಿ ಸ್ವೀಕರಿಸಲಾಗಿದೆ. ಇವುಗಳಲ್ಲಿ 14ರ ವರದಿ ಈವರೆಗೆ ಬಂದಿದೆ. ಈ 14ರಲ್ಲಿ 9ರಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, ಐದರಲ್ಲಿ ಯಾವುದೇ ವೈರಸ್ ಪತ್ತೆಯಾಗಿರಲಿಲ್ಲ.

ಇದರಿಂದ ಈವರೆಗೆ ಜ.8ರ ಬಳಿಕ ಜಿಲ್ಲೆಯಲ್ಲಿ ಸಿಕ್ಕಿದ ಮಂಗಗಳ ಕಳೇಬರಗಳ ಸಂಖ್ಯೆ 51ಕ್ಕೇರಿದೆ. ಇದರಲ್ಲಿ 23 ಮಂಗಗಳ ಪೋಸ್ಟ್‌ಮಾರ್ಟಂ ಮಾಡಲಾಗಿದೆ. ಉಳಿದವುಗಳನ್ನು ಬೇರೆ ಬೇರೆ ಕಾರಣಗಳಿಂದ ಪೋಸ್ಟ್ ಮಾರ್ಟಂ ನಡೆಸಲಾಗಿಲ್ಲ. 23ರಲ್ಲಿ 21ಮಂಗಗಳನ್ನು ಪರೀಕ್ಷೆಗಾಗಿ ಸ್ವೀಕರಿಸಲಾಗಿದೆ. ಇವುಗಳಲ್ಲಿ 14ರ ವರದಿ ಈವರೆಗೆ ಬಂದಿದೆ. ಈ 14ರಲ್ಲಿ 9ರಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, ಐದರಲ್ಲಿ ಯಾವುದೇ ವೈರಸ್ ಪತ್ತೆಯಾಗಿರಲಿಲ್ಲ. ಮೊದಲ ಬಾರಿ ಬಂದ ವರದಿಯಲ್ಲಿ ಎಂಟು ಮಂಗಗಳಲ್ಲಿ ವೈರಸ್ ಪತ್ತೆಯಾದರೆ, ಆ ಬಳಿಕ ಬೆಳ್ವೆ ಮಡಾಮಕ್ಕಿಯಲ್ಲಿ ದೊರೆತ ಮಂಗನಲ್ಲಿ ವೈರಸ್ ಕಂಡುಬಂದಿತ್ತು. ಇನ್ನು ಹೆಬ್ರಿ ಕುಚ್ಚೂರು ಹಾಗೂ ಪೇತ್ರಿಯ ಕುಂಜಾಲಿನ ಮಂಗಗಳ ವರದಿ ಬರಬೇಕಾಗಿದೆ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು.

ಆದರೆ ಜಿಲ್ಲೆಯಲ್ಲಿ ಎಲ್ಲೂ ಮಾನವನಲ್ಲಿ ಜ್ವರದ ಪ್ರಕರಣ ಈವರೆಗೆ ವರದಿಯಾಗಿಲ್ಲ. ವೈರಸ್ ಪತ್ತೆಯಾದ ಪಿಎಚ್‌ಸಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಎಲ್ಲಾ ತುರ್ತು ಕ್ರಮ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಮಣಿಪಾಲ: 28 ಮಂದಿ ಚಿಕಿತ್ಸೆಯಲ್ಲಿ

ಶಿವಮೊಗ್ಗ ಜಿಲ್ಲೆ ಸಾಗರ ಹಾಗೂ ಆಸುಪಾಸಿನ ಗ್ರಾಮಗಳ ಸುಮಾರು 107 ಮಂದಿ ಶಂಕಿತ ಮಂಗನಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಈವರೆಗೆ ದಾಖಲಾಗಿದ್ದಾರೆ. ಅಲ್ಲದೇ ಇಬ್ಬರು ಜ್ವರ ಮರುಕಳಿಸಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಇವರಲ್ಲಿ 42 ಮಂದಿಗೆ ಮಂಗನ ಕಾಯಿಲೆ ಇರುವುದು ಪರೀಕ್ಷೆಯಿಂದ ಖಚಿತವಾಗಿದೆ. ಉಳಿದ 60 ಮಂದಿಗೆ ಮಂಗನ ಕಾಯಿಲೆ ಇಲ್ಲದಿರುವುದು ವರದಿಯಾಗಿದ್ದು, ಇನ್ನು 7 ಮಂದಿಯ ಪರೀಕ್ಷಾ ವರದಿ ಬರಬೇಕಾಗಿದೆ. ಈಗಾಗಲೇ 80 ಮಂದಿ ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 28 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ. ಅವರಲ್ಲಿ ಒಬ್ಬರು ಮರು ದಾಖಲಾದವರೂ ಸೇರಿದ್ದಾರೆ. ಮಂಗನಕಾಯಿಲೆಯಿಂದ ಇಲ್ಲಿ ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News