ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ: ವನಿತಾ ಎನ್. ತೊರವಿ

Update: 2019-01-21 16:31 GMT

ಮಣಿಪಾಲ, ಜ. 21: ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳ ಮಕ್ಕಳು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರ ಬರೆಯುತ್ತಿದ್ದರು. ಈ ಸಮಸ್ಯೆಗಳಿಗೆ ರಾಜ್ಯಮಟ್ಟದಿಂದ ಪರಿಹಾರ ಒದಗಿಸು ವುದು ವಿಳಂಬವಾಗುತಿದ್ದ ಹಿನ್ನಲೆಯಲ್ಲಿ, ಆಯೋಗಕ್ಕೆ ಸಲ್ಲಿಕೆಯಾಗುವ ಮಕ್ಕಳ ದೂರುಗಳನ್ನು ಸಂಬಂದಪಟ್ಟ ಜಿಲ್ಲೆಯಲ್ಲಿಯೇ ಪರಿಶೀಲಿಸಿ, ಶೀಘ್ರವಾಗಿ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ಎನ್. ತೊರವಿ ತಿಳಿಸಿದ್ದಾರೆ.

ಸೋಮವಾರ ಮಣಿಪಾಲದ ಜಿಪಂ ಡಾ.ವಿ.ಎಸ್.ಆಚಾರ್ಯ ಸಭಾಂಗಣ ದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಇವರ ಸಹಯೋಗದಲ್ಲಿ ನಡೆದ ಮೂಲಭೂತ ಸೌಕರ್ಯಗಳ ಸಮಸ್ಯೆ ಕುರಿತು ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆಯೋಗಕ್ಕೆ ಮಕ್ಕಳು ಸಲ್ಲಿಸುತ್ತಿದ್ದ ಸಮಸ್ಯೆಗಳು ಎಲ್ಲಾ ಇಲಾಖೆಗಳಿಗೆ ಸಂಬಂಧಪಟ್ಟದಾಗಿದ್ದು, ಈ ಸಮಸ್ಯೆಗಳಿಗೆ ಪ್ರತಿ ಜಿಲ್ಲೆಯ ವಿವಿಧ ಇಲಾಖೆ ಗಳಿಂದ ಪರಿಹಾರ ಒದಗಿಸುವಲ್ಲಿ ವಿಳಂಬವಾಗುತ್ತಿದ್ದ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಮಕ್ಕಳಿಂದ ಅಹವಾಲು ಸ್ವೀಕರಿಸಿ, ಜಿಲ್ಲಾಮಟ್ಟದಲ್ಲೇ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುತ್ತಿದೆ ಎಂದರು.

ಮಕ್ಕಳು ಸಲ್ಲಿಸುವ ಸಮಸ್ಯೆಗಳಲ್ಲಿ ಪ್ರಮುಖವಾಗಿ ಶಾಲೆಗೆ ಬರಲು ರಸ್ತೆ ವ್ಯವಸ್ಥೆ, ಬಸ್ ವ್ಯವಸ್ಥೆ, ಶೌಚಾಲಯದ ಸಮಸ್ಯೆ ಕುರಿತು ಸಲ್ಲಿಕೆಯಾಗುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಅಹವಾಲಿನಲ್ಲಿ ಬೈಂದೂರು ಬಾಗದ ವಿದ್ಯಾರ್ಥಿಗಳು ಶಾಲೆಗೆ ಬರಲು ಸೂಕ್ತ ರಸ್ತೆ ವ್ಯವಸ್ಥೆ ಹಾಗೂ ಸೈಕಲ್ ನೀಡಬೇಕೆಂದು ಕೋರಿದ್ದಾರೆ.ಜಿಲ್ಲಾಮಟ್ಟದಲ್ಲಿ ಅಹವಾಲು ಸ್ವೀಕರಿಸುವುದರಿಂದ ಮಕ್ಕಳ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿದೆ. ಮಕ್ಕಳ ಸಮಸ್ಯೆಗಳ ಕುರಿತಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿವಹಿರ್ಸಬೇಕೆಂದು ತೊರವಿ ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮಕ್ಕಳು ಸಾಮಾನ್ಯ ವಾಗಿ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹೇಳುವುದಿಲ್ಲ. ಮಕ್ಕಳು ಸಮಸ್ಯೆ ಹೇಳುತಿದ್ದಾರೆ ಅಂದರೆ ಅದರ ಗಂಭೀರತೆಯನ್ನು ಅರಿಯಬೇಕು. ಸಮಸ್ಯೆಗಳು ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ದೈರ್ಯವಾಗಿ ಮಾತನಾಡಬೇಕು. ಮಕ್ಕಳಿಗೆ ಯಾವ ಸಮಸ್ಯೆಗೆ ಯಾವ ಅಧಿಕಾರಿಯ ಬಳಿ ಮಾತನಾಡಬೇಕೆಂಬ ಮಾಹಿತಿಯ ಕೊರತೆ ಇದ್ದು, ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳು ಮಾಹಿತಿ ಪಡೆಯಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ನೀಡುವುದು ನಮ್ಮ ಮುಖ್ಯ ಉದ್ದೇಶ. ಮಕ್ಕಳಿಂದ ಸಮಸ್ಯೆಯ ಅಹವಾಲು ಬರುವುದು ಅಪರೂಪ, ಅಂತಹ ಸಮಸ್ಯೆ ಗಳ ಕುರಿತು ಇಂದು ಅಹವಾಲು ಬಂದಿದ್ದು, ಅದಕ್ಕೆ ಪರಿಹಾರ ಒದಗಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಣಿಪಾಲದ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ನ ಉಪನ್ಯಾಸಕಿ ಐಡಾ ಡಿಸೋಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಮಕ್ಕಳಾ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮೋಹನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News