ರಜತ ಸಂಭ್ರಮ ಸಮಾವೇಶದಂದು ಸಂಚಾರಕ್ಕೆ ಅಡಚಣೆ: ಪ್ರಕರಣ ದಾಖಲು

Update: 2019-01-21 16:39 GMT

ಮಂಗಳೂರು, ಜ.21: ಡಾ.ಎಂ.ಎನ್.ರಾಜೇಂದ್ರಕುಮಾರ್ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ 25 ವರ್ಷಗಳ ಸೇವೆಯ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶದಂದು ಸಂಚಾರಕ್ಕೆ ಅಡಚಣೆಯಾದ ಹಿನ್ನೆಲೆ ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಜ.19ರಂದು ನಗರದ ಫುಟ್‌ಬಾಲ್ ಮೈದಾನ ಹಾಗೂ ನೆಹರೂ ಮೈದಾನದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಜಂಕ್ಷನ್‌ಗಳಲ್ಲಿ, ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಮತ್ತು ರಸ್ತೆ ವಿಭಾಜಕಗಳಲ್ಲಿ ಅನಧಿಕೃತ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಎಂದು ಆರೋಪಿಸಿ ಮಂಗಳೂರು ಮಹಾನಗರ ಪಾಲಿಕೆಯಿಂದ ದೂರು ದಾಖಲಿಸಲಾಗಿದೆ.

ಸಮಾವೇಶ ಆಯೋಜಕರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು), 283 (ಸಾರ್ವಜನಿಕರ ಸಂಚಾರಕ್ಕೆ ಅಡಚಣೆ), 290 (ಸಾರ್ವಜನಿಕರಿಗೆ ವಿನಾಕಾರಣ ಉಪದ್ರವ ನೀಡುವುದು)ರಂತೆ ದೂರು ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News