ಹೆತ್ತವರು, ಪ್ರೇಯಸಿ, 9 ತಿಂಗಳ ಮಗುವನ್ನು ಕೊಂದು ಪೊಲೀಸ್ ಗುಂಡಿಗೆ ಬಲಿಯಾದ

Update: 2019-01-21 16:53 GMT

 ಪೋರ್ಟ್‌ಲ್ಯಾಂಡ್ (ಅಮೆರಿಕ), ಜ. 21: ಅಮೆರಿಕದ ಗ್ರಾಮೀಣ ಒರೆಗಾನ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಮನೆಯಲ್ಲಿ ಕೊಲೆ ಮಾಡಿದ್ದಾನೆ ಹಾಗೂ ಬಾಲಕಿಯೊಬ್ಬಳನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಅವನನ್ನು ಗುಂಡು ಹಾರಿಸಿ ಕೊಂದಿದ್ದಾರೆ.

42 ವರ್ಷದ ಮಾರ್ಕ್ ಲಿಯೊ ಗ್ರೆಗರಿ ಗಾಗೊ ಶನಿವಾರ ರಾತ್ರಿ ತನ್ನ ಹೆತ್ತವರು, 31 ವರ್ಷದ ಪ್ರೇಯಸಿ ಮತ್ತು 9 ತಿಂಗಳ ತನ್ನ ಹೆಣ್ಣು ಮಗುವನ್ನು ಕೊಂದನು ಎಂದು ಕ್ಲಾಕಮಸ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.

ಅವರ ಹತ್ಯೆ ಗುಂಡು ಹಾರಾಟದಿಂದ ಸಂಭವಿಸಿಲ್ಲ ಎಂದು ‘ದ ಒರಗಾನಿಯನ್’ ವರದಿ ಮಾಡಿದೆ. ಸಾವಿನ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಶೆರಿಫ್ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಹಂತಕನು ತನ್ನ ಪ್ರೇಯಸಿಯ ಮೊದಲ ಸಂಬಂಧದಿಂದ ಹುಟ್ಟಿದ 8 ವರ್ಷದ ಮಗಳನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದನು. ಆಗ ಪೊಲೀಸರು ಅವನನ್ನು ಗುಂಡು ಹಾರಿಸಿ ಕೊಂದರು.

8 ವರ್ಷದ ಬಾಲಕಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News