ಬೋಟು ಸಹಿತ ಮೀನುಗಾರರು ನಾಪತ್ತೆ: ಮಿಲಿಟರಿ ಕಾರ್ಯಾಚರಣೆಗೆ ದಾಮೋದರ್ ಕುಟುಂಬಸ್ಥರ ಆಗ್ರಹ

Update: 2019-01-21 17:16 GMT

ಉಡುಪಿ, ಜ.21: ಕಳೆದ 37 ದಿನಗಳಿಂದ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರು ಅಪಹರಣಕ್ಕೀಡಾಗಿ ದ್ದಾರೆಂಬ ದೃಢವಾದ ನಂಬಿಕೆಯಲ್ಲಿರುವ ಕುಟುಂಬಸ್ಥರು, ಶೋಧ ಕಾರ್ಯಕ್ಕೆ ಮಹಾರಾಷ್ಟ್ರ ರಾಜ್ಯದ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಸಹಕಾರ ನೀಡದ ಹಿನ್ನೆಲೆಯಲ್ಲಿ ಮಿಲಿಟರಿ ಸಹಾಯ ಪಡೆದು ಕಾರ್ಯಾಚರಣೆ ನಡೆಸು ವಂತೆ ಆಗ್ರಹಿಸಿದ್ದಾರೆ.

ನಾಪತ್ತೆಯಾದ ಮೀನುಗಾರ ದಾಮೋದರ್ ಸಾಲ್ಯಾನ್ ಅವರ ಬಡಾನಿಡಿ ಯೂರು ಗ್ರಾಮದ ಪಾವಂಜಿಗುಡ್ಡೆಯಲ್ಲಿರುವ ಮನೆಗೆ ಸೋಮವಾರ ತೆರಳಿದ ಮಾಧ್ಯಮವದವರ ಮುಂದೆ ಕುಟುಂಬದವರು ತಮ್ಮ ನೋವು, ಆಕ್ರೋಶ ಹಾಗೂ ಬೇಡಿಕೆಗಳನ್ನು ಹೇಳಿಕೊಂಡರು.

‘ನಾಪತ್ತೆಯಾದವರು ನೀರಿನ ಮೇಲೆಯೂ ಇಲ್ಲ, ಕೆಳಗೆಯೂ ಇಲ್ಲ, ಭೂಮಿಯಲ್ಲೂ ಇಲ್ಲ. ಯಾವುದೇ ಸುಳಿವು ಕೂಡ ಸಿಗುತ್ತಿಲ್ಲ. ಹಾಗಾದರೆ ಅವರೆಲ್ಲ ಎಲ್ಲಿದ್ದಾರೆ. ನಮ್ಮವರನ್ನು ಮಹಾರಾಷ್ಟ್ರದ ಮೀನುಗಾರರು ಅಪಹರಿಸಿಕೊಂಡು ಹೋಗಿದ್ದಾರೆಯೇ ಹೊರತು ಬೋಟು ಯಾವುದೇ ಅವಘಡಕ್ಕೀಡಾಗಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ದಾಮೋದರ್ ಸಾಲ್ಯಾನ್‌ರ ಸಹೋದರ ಗಂಗಾಧರ ಸಾಲ್ಯಾನ್.

ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬಹುತೇಕ ಬೋಟುಗಳು ರಾತ್ರಿ ವೇಳೆ ಬೋಟುಗಳನ್ನು ಬಂದ್ ಮಾಡಿ ಮೀನುಗಾರರು ಬೋಟಿನೊಳಗೆ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಆಗ ಬೋಟಿನ ಮುಂದಿನ ಹಾಗೂ ಹಿಂದಿನ ಎರಡು ದೀಪಗಳು ಉರಿಯುತ್ತಿರುತ್ತವೆ. ಆ ದೀಪಗಳು ಸರಿ ಸುಮಾರು ಎರಡು ಕಿ.ಮೀ.ವರೆಗೆ ಗೋಚರಿಸುತ್ತದೆ. ಹಾಗಾಗಿ ಈ ಬೋಟಿಗೆ ಯಾವುದೇ ಹಡಗು ಢಿಕ್ಕಿ ಹೊಡೆಯಲು ಸಾಧ್ಯವೇ ಇಲ್ಲ ಎಂದು ಅವರು ಹೇಳುತ್ತಾರೆ.

ಕೆಲವೊಂದು ಸಂಶಯಗಳ ಆಧಾರದಲ್ಲಿ ನೌಕಪಡೆಯು ಸಮುದ್ರದ ಮೇಲ್ಭಾಗ ಹಾಗೂ ಆಳದಲ್ಲಿ ಹುಡುಕಾಟ ನಡೆಸುತ್ತಿದೆ. ಅದೇ ರೀತಿ ನಮ್ಮ ಸಂಶಯದ ಆಧಾರದಲ್ಲಿ ಭೂಮಿ ಮೇಲೂ ತೀವ್ರ ಕಾರ್ಯಾಚರಣೆ ನಡೆಸಿ ಹುಡುಕುವ ಕೆಲಸ ಮಾಡಬೇಕು. ಅದಕ್ಕಾಗಿ ಸರಕಾರ ಪೊಲೀಸರ ಬದಲು ಮಿಲಿಟರಿ ಸಹಾಯ ಪಡೆಯಬೇಕು. ಭೂಸೇನೆಗೆ ಸಾಕಷ್ಟು ಅಧಿಕಾರ ಇರುವುದರಿಂದ ಅಪಹರಣಕ್ಕೀಡಾಗಿರುವ ನಮ್ಮವರು ಶೀಘ್ರವೇ ಪತ್ತೆಯಾಗುತ್ತಾರೆ ಎಂದು ಅವರು ಆಶಾಭಾವನೆಯನ್ನು ವ್ಯಕ್ತಪಡಿಸಿದರು.

‘ಕರಾವಳಿ ಶಾಸಕರು ಹಾಗೂ ಸಂಸದರು ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿ ಈ ಕಾರ್ಯಾಚರಣೆಯನ್ನು ಭೂಸೇನೆಗೆ ಒಪ್ಪಿಸಿ ಮಿಲಿಟರಿ ಸಹಾಯದಿಂದ ಮಹಾರಾಷ್ಟ್ರದ ಪ್ರಮುಖ ಬಂದರುಗಳ ನದಿಗಳಲ್ಲಿ ಶೋಧ ಕಾರ್ಯ ನಡೆಸ ಬೇಕು. ನಮ್ಮ ಜನಪ್ರತಿನಿಧಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಂತೆ ಕಾಣುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೀನುಗಾರ ರೆಲ್ಲ ಒಂದಾಗಿ ಕಾರವಾರದಿಂದ ಮಂಗಳೂರುವರೆಗೆ ಚುನಾವಣೆ ಬಹಿಷ್ಕರಿಸುವ ಕೆಲಸ ಮಾಡಬೇಕಾಗಿದೆ’ ಎಂದು ದಾಮೋದರ್ ಸಾಲ್ಯಾನ್‌ರ ಅಕ್ಕನ ಗಂಡ ಉದಯ ಬಂಗೇರ ತಮ್ಮ ಆಕ್ರೋಶವನ್ನು ತೋರ್ಪಡಿಸಿದರು.

ಮನೆ ತುಂಬ ಕಣ್ಣೀರು, ಆತಂಕ !

ಸುವರ್ಣ ತಿಂಗಳಾಯ ಹಾಗೂ ಸೀತಾ ಸಾಲ್ಯಾನ್ ದಂಪತಿಯ ಆರು ಮಕ್ಕಳ ಪೈಕಿ ದಾಮೋದರ್ ಸಾಲ್ಯಾನ್ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಬ್ಬರಿಗೆ ವಿವಾಹವಾಗಿದ್ದು, ನಾಲ್ವರು ಗಂಡು ಮಕ್ಕಳು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ.

ಈ ಇಡೀ ಕುಟುಂಬ ಮೀನುಗಾರಿಕೆಯನ್ನು ಅವಲಂಬಿಸಿ ಬದುಕು ನಡೆಸು ತ್ತಿದ್ದು, ದಾಮೋದರ್ ಸಾಲ್ಯಾನ್‌ರ ನಾಪತ್ತೆಯಾದ ದಿನದಿಂದ ಮೂವರು ತಮ್ಮಂದಿರಾದ ಗಂಗಾಧರ ಸಾಲ್ಯಾನ್, ಪ್ರಮೋದ್ ಸಾಲ್ಯಾನ್ ಹಾಗೂ ಮಾಧವ ಸಾಲ್ಯಾನ್ ಕೆಲಸಕ್ಕೆ ಹೋಗದೆ ಅಣ್ಣನ ಹುಡುಕಾಟಕ್ಕಾಗಿ ಅಲೆದಾಡು ತ್ತಿದ್ದಾರೆ. ತಂದೆ ತಾಯಿ, ಅಕ್ಕ ರಮಣಿ, ಪತ್ನಿ ಮೋಹಿನಿ ಸದಾ ಕಣ್ಣೀರಿಡುತ್ತ ಮನೆ ವುಗನಿಗಾಗಿ ಎದುರು ನೋಡುತ್ತಿದ್ದಾರೆ.

ಸರಕಾರ ಸರಿಯಾಗಿ ಹುಡುಕಾಟ ನಡೆಸಿದರೆ ನಾಪತ್ತೆಯಾದವರು ಖಂಡಿತ ಸಿಗುತ್ತಾರೆ. ನನ್ನ ತಮ್ಮ ಹಾಗೂ ಇತರರನ್ನು ಯಾರೋ ಅಪಹರಿಸಿದ್ದಾರೆಯೇ ಹೊರತು ಬೇರೆ ಏನೂ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಇವರು ಎಲ್ಲದ್ದಾರೆಯೋ ಗೊತ್ತಿಲ್ಲ. ಸರಿಯಾಗಿ ಊಟ ಮಾಡಿದ್ದಾನೋ ಇಲ್ಲವೋ. ಎಲ್ಲಿಯಾದರೂ ಅಪಹರಿಸಿದವರು ನನ್ನ ಕೈಗೆ ಸಿಕ್ಕಿದರೆ ನಾನೇ ಅವರನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ ಎಂದು ದಾಮೋದರ್ ಸಾಲ್ಯಾನ್‌ರ ಅಕ್ಕ ರಮಣಿ ಕಣ್ಣೀರಿಡುತ್ತ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News