ನಾಪತ್ತೆ ಬೋಟಿಗಾಗಿ ಮಹಾರಾಷ್ಟ್ರ ಬಂದರುಗಳಲ್ಲಿ ಶೋಧ: ಕಾರ್ಯಾಚರಣೆ ಬಗ್ಗೆ ಪೊಲೀಸ್ ತಂಡದಲ್ಲಿದ್ದ ಮೀನುಗಾರರ ಅಸಮಾಧಾನ

Update: 2019-01-21 17:21 GMT

ಮಲ್ಪೆ, ಜ.21: ಬೋಟು ಸಹಿತ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣ ಸಂಬಂಧ ಮಹಾರಾಷ್ಟ್ರ ಬಂದರುಗಳನ್ನು ಸಂಪರ್ಕಿಸುವ ನದಿಗಳಲ್ಲಿ ನಡೆದ ಪೊಲೀಸ್ ಹಾಗೂ ಕೋಸ್ಟ್ ಗಾರ್ಡ್ ಶೋಧ ಕಾರ್ಯಾಚರಣೆ ಬಗ್ಗೆ ತಂಡದಲ್ಲಿದ್ದ ಮೀನುಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುವರ್ಣ ತ್ರಿಭುಜ ಬೋಟು ಸಂಪರ್ಕ ಕಡಿದುಕೊಂಡು ಕಣ್ಮರೆಯಾದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರು ದಿನ ನಾಪತ್ತೆಯಾದ ಕುಟುಂಬಕ್ಕೆ ಸೇರಿದ ಒಂಭತ್ತು ಮಂದಿ ಮೀನುಗಾರರನ್ನು ಒಳಗೊಂಡ ಪೊಲೀಸ್ ತಂಡಗಳು ಹುಡುಕಾಟಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿತ್ತು. ಇದರಲ್ಲಿ ಇಬ್ಬರು ಕಾರಾವರ ಪೊಲೀಸರು ಇದ್ದರೆನ್ನಲಾಗಿದೆ.

ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆಯಲ್ಲಿ ತಲಾ ಮೂವರು ಮೀನುಗಾರರನ್ನೊಳಗೊಂಡ ಮೂರು ಪೊಲೀಸ್ ತಂಡ ವಿಭಾಗಗಳನ್ನಾಗಿ ರಚಿಸಿ ವೆಂಗುರ್ಲ ಪ್ರಮುಖ ಬಂದರಿನ ಮೂಲಕ ಕಿರಣ್‌ಪನಿ, ರೇಡಿ, ನಿವಾಟಿ, ಮಾಲ್ವನ್ ಪ್ರಮುಖ ಬಂದರಿನ ಮೂಲಕ ಅಚೀರಾ, ದೇವಘಡ ಬಂದರಿನ ಮೂಲಕ ವಿಜಯದುರ್ಗ ಬಂದರುಗಳ ನದಿಗಳಲ್ಲಿ ಸುಮಾರು 200-500 ಮೀಟರ್ ವರೆಗೆ ಹುಡುಕಾಟ ನಡೆಸಲಾಗಿತ್ತು. ಮರುದಿನ ಕಲಸೆ ಬಂದರಿ ನಲ್ಲಿ ಎರಡು ತಂಡಗಳು ಶೋಧ ಕಾರ್ಯ ನಡೆಸಿದ್ದವು.

ಅದಕ್ಕಾಗಿ ಎರಡು ಕೋಸ್ಟ್‌ಗಾರ್ಡ್ ಬೋಟು ಹಾಗೂ ಒಂದು ಆಳ ಸಮುದ್ರ ಮೀನುಗಾರಿಕಾ ಬೋಟುಗಳನ್ನು ಬಳಸಿಕೊಳ್ಳಲಾಗಿತ್ತು. ಹೀಗೆ ಆರು ದಿನಗಳ ಕಾಲ ಈ ಎಲ್ಲ ಬಂದರು ಹಾಗೂ ನದಿಗಳಲ್ಲಿ ಸುವರ್ಣ ತ್ರಿಭುಜ ಬೋಟಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ತಂಡಕ್ಕೆ ಯಾವುದೇ ಸುಳಿವು ದೊರೆತಿಲ್ಲ ಎನ್ನುತ್ತಾರೆ ತಂಡದಲ್ಲಿದ್ದ ಮೀನುಗಾರರು.

ಅದೇ ರೀತಿ ಡಿ.27ರಂದು ಏಳು ಮಂದಿ ಮೀನುಗಾರರನ್ನೊಳಗೊಂಡ ಪೊಲೀಸ್ ತಂಡ ಗೋವಾಕ್ಕೆ ತೆರಳಿ ಅಲ್ಲಿ ಬೈತುಲ್, ಪಣಜಿ, ವಾಸ್ಕೋ ಬಂದರುಗಳಲ್ಲಿ ಹುಡುಕಾಟ ನಡೆಸಿತ್ತು. ಇಲ್ಲಿ ಕೂಡ ಯಾವುದೇ ಸುಳಿವು ಲಭಿಸದೆ ತಂಡ ವಾಪಾಸ್ಸು ಬಂದಿತ್ತು. ಈ ಕಾರ್ಯಾಚರಣೆ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿರುವ ಮೀನುಗಾರರು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಾಗಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಪಹರಣದ ಬಗ್ಗೆ ಬಲವಾದ ಸಂಶಯ ಹೊಂದಿರುವ ಮಲ್ಪೆಯ ಮೀನುಗಾರರು, ಮಹಾರಾಷ್ಟ್ರದ ಬಂದರುಗಳ ನದಿಯನ್ನು ಸಂಪೂರ್ಣ ಶೋಧ ನಡೆಸು ವಲ್ಲಿ ಪೊಲೀಸ್ ಹಾಗೂ ಕೋರ್ಸ್ಟ್ ಗಾರ್ಡ್ ತಂಡಗಳು ವಿಫಲವಾಗಿವೆ ಎಂದು ಆರೋಪಿಸುತ್ತಾರೆ. ಮಹಾರಾಷ್ಟ್ರದ ಮೀನುಗಾರರು ನಮ್ಮವರನ್ನು ಅಪಹರಿಸಿ ಬೋಟನ್ನು ಬಂದರುಗಳನ್ನು ಸಂಪರ್ಕಿಸುವ ನದಿಯಲ್ಲಿ ಇಟ್ಟಿದ್ದಾರೆ. ಆದುದರಿಂದ ನದಿಗಳಲ್ಲಿ ಹುಡುಕುವ ಕೆಲಸ ಆಗಬೇಕು. ಕೇವಲ 500 ಮೀಟರ್‌ವರೆಗೆ ಹುಡುಕಿದರೆ ಯಾವುದೇ ಸುಳಿವು ಸಿಗುವುದಿಲ್ಲ ಎಂದು ತಂಡದಲ್ಲಿದ್ದ ಮೀನುಗಾರರು ಅಸಮಾಧಾನವನ್ನು ಹೊರ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News