ಜ.28ರಂದು ಆ್ಯಡಮ್ ಕ್ಲ್ಯಾಪ್‌ಹ್ಯಾಮ್‌ರ ‘ಎ ವಿಲೇಜ್ ಇನ್ ಸೌತ್ ಇಂಡಿಯಾ’ ಕೃತಿ ಬಿಡುಗಡೆ
ಮಂಗಳೂರು, ಜ. 22: ತುಳುನಾಡಿನ ಸಂಸ್ಕೃತಿಯತ್ತ ಆಕರ್ಷಿತರಾಗಿ ಅಧ್ಯಯನ ನಡೆಸಿದ ಇಂಗ್ಲೆಂಡ್‌ನ ಆ್ಯಡಮ್ ಕ್ಲ್ಯಾಪ್‌ಹ್ಯಾಮ್ ಎಂಬವರು ರಚಿಸಿದ ಪುಸ್ತಕ ‘ಎ ವಿಲೇಜ್ ಇನ್ ಸೌತ್ ಇಂಡಿಯಾ’ ಜ.28ರಂದು ಇಂಗ್ಲೆಂಡ್‌ನಲ್ಲಿ ಬಿಡುಗಡೆಯಾಗಲಿದೆ.
ಇಂಗ್ಲೆಂಡ್‌ನ ಬಿಬಿಸಿ ವಾಹಿನಿಯ ಡಾಕ್ಯುಮೆಂಟರಿ ಪ್ರೊಡ್ಯೂಸರ್ ಆಗಿ ನಿವೃತ್ತರಾಗಿರುವ ಕ್ಲ್ಯಾಪ್‌ಹ್ಯಾಮ್ ತನ್ನ ಕಾರ್ಯನಿಮಿತ್ತ ಭಾರತಕ್ಕೂ ಹಲವು ಬಾರಿ ಭೇಟಿ ನೀಡಿದ್ದರು. ನಿವೃತ್ತ ಜೀವನದಲ್ಲಿ ತುಳುನಾಡಿನ ಕಲೆ, ಸಂಸ್ಕೃತಿ, ಆಚಾರ, ವಿಚಾರದ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಬರೆದಿರುವ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕ್ಲ್ಯಾಪ್‌ಹ್ಯಾಮ್ ಮಾಹಿತಿ ನೀಡಿದರು. ಮಂಗಳೂರಿನಲ್ಲೇ ಇರುವುದರಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದರು.
ನಿವೃತ್ತ ಜೀವನವನ್ನು ಸ್ಮರಣೀಯವಾಗಿ ಕಳೆಯಲು ಮೊದಲಿಗೆ ಕೇರಳದ ಕೊಚ್ಚಿನ್‌ನಲ್ಲಿ 78 ವರ್ಷ ಪ್ರಾಯದ ಕ್ಲ್ಯಾಪ್‌ಹ್ಯಾಮ್ ವಾಸಿಸಲು ಆರಂಭಿಸಿದರು. ಆದರೆ ಅಲ್ಲಿ ತನ್ನ ಇಚ್ಚೆಗೆ ತಕ್ಕಂತೆ ನೆಲೆಸಲು ಸಾಧ್ಯವಾಗದೆ 2002ರಲ್ಲಿ ಮಂಗಳೂರಿಗೆ ಬಂದು 9 ವರ್ಷಗಳ ಕಾಲ ಸುರತ್ಕಲ್ ಬಳಿಯ ಹೊಸಬೆಟ್ಟು ವಿನಲ್ಲಿದ್ದರು. 2012ರ ವೇಳೆಗೆ ಕಟಪಾಡಿ ಬಳಿಯ ಮಣಿಪುರ ಗ್ರಾಮಕ್ಕೆ ಸ್ಥಳಾಂತರಗೊಂಡ ಅವರು, ಗ್ರಾಮದ ಪಶ್ಚಿಮ ಭಾಗದಲ್ಲಿ, ಉದ್ಯಾವರ ಹೊಳೆ ಬದಿಯಲ್ಲಿ ಗುತ್ತಿನಮನೆ ಸಹಿತ ಸ್ವಲ್ಪ ಜಾಗವನ್ನು ಲೀಸ್‌ಗೆ ಪಡೆದು ವಾಸಿಸಲಾರಂಭಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ಬೆರೆತು ಹೊಸ ಅನುಭವ ಪಡೆದುಕೊಂಡರು. ತುಳುನಾಡಿನ ಜನರ ಜತೆಗಿನ ಒಡನಾಟ ಹೊಸ ಲೋಕವನ್ನೇ ಪರಿಚಯ ಮಾಡಿಸಿತು. ಈ ಅನುಭವವನ್ನು ದಾಖಲಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಲು ನಿರ್ರಿಸಿದೆ ಎಂದು ಅವರು ವಿವರಿಸಿದರು.
ಮಣಿಪುರ ಗ್ರಾಮ ಸೇರಿದಂತೆ, ಸ್ಥಳೀಯವಾಗಿ ನಡೆಯುವ ನೇಮ, ಕೋಲ, ಕಂಬಳ, ಜಾತ್ರೆ, ಕೋಳಿ ಅಂಕ, ಯಕ್ಷಗಾನಗಳಿಗೆ, ಮದುವೆ, ಹಬ್ಬ, ಉತ್ಸವ ಕಾರ್ಯಕ್ರಮಗಳಿಗೆ ಹೋಗಿ, ಜನರಿಂದ ಅದಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದೇನೆ. ತುಳುನಾಡಿನ ಸಂಸ್ಕೃತಿಯಲ್ಲಿ ವೈವಿಧ್ಯತೆಯಿದೆ. ನದಿಯಲ್ಲಿ ಮೀನು ಹಿಡಿಯುವುದು, ತೆಂಗಿನ ಕಾಯಿ ಕೊಯ್ಯುವುದು, ನಾಟಿ, ಕೊಯ್ಲು, ಮಳೆಗಾಲ ಎಲ್ಲವೂ ಅದ್ಭುತ ವಿಚಾರಗಳು. ಗಲ್ಫ್ ರಾಷ್ಟ್ರಗಳೊಂದಿಗೆ ನೇರ ಸಂಪರ್ಕ ತುಳುವರ ಇನ್ನೊಂದು ವಿಶೇಷತೆ. ಪ್ರತಿ ಹಳ್ಳಿಯಲ್ಲೂ ಹೊರರಾಷ್ಟ್ರದಲ್ಲಿ ದುಡಿಯುತ್ತಿರುವ ಮಂದಿ ಸಿಗುತ್ತಾರೆ. ಈ ಎಲ್ಲ ವಿಚಾರಗಳನ್ನು ಸ್ಥಳೀಯರಿಂದಲೇ ಮಾಹಿತಿ ಪಡೆದು ಪುಸ್ತಕದಲ್ಲಿ ಪ್ರಕಟಿಸಿದ್ದೇನೆ. ಭಾರತದಲ್ಲಿ ತನ್ನ ಪ್ರವಾಸ ಇನ್ನೂ ಮುಗಿದಿಲ್ಲ. ಇಲ್ಲಿನ ಗ್ರಾಮೀಣ ಸೊಗಡು ಬಗೆದಷ್ಟೂ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತದೆ ಎಂದರು.
ಕಲಾವಿದ ದಿನೇಶ್ ಹೊಳ್ಳ ಮಾತನಾಡಿ, ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಆವರಣಗೊಡೆಯಲ್ಲಿ ಈ ಹಿಂದೆ ರಚಿಸಿದ್ದ ರೇಖಾ ಚಿತ್ರದ ವರದಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿದ ಆ್ಯಡಮ್ ಕ್ಲ್ಯಾಪ್‌ಹ್ಯಾಮ್ ನನ್ನ ಕುರಿತು ಮಾಹಿತಿ ಸಂಗ್ರಹಿಸಿ, ಸಂಪರ್ಕಿಸಿದರು. ಅಂದಿನಿಂದ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರ ಪುಸ್ತಕದಲ್ಲಿ ನಾನು ರಚಿಸಿದ 25 ರೇಖಾ ಚಿತ್ರಗಳನ್ನು ಪ್ರಕಟಿಸಿದ್ದಾರೆ ಎಂದರು.
ಆ್ಯಡಮ್ ಕ್ಲ್ಯಾಪ್‌ಹ್ಯಾಮ್ ಸಹವರ್ತಿ ನವೀನ್ ಉಪಸ್ಥಿತರಿದ್ದರು.