ಕೆಲಸಕ್ಕಿದ್ದ ಮನೆಗೆ ನುಗ್ಗಿ ನಗನಗದು ಕಳವು: ಆರೋಪಿ ದಂಪತಿ ಬಂಧನ

Update: 2019-01-22 14:37 GMT

ಕುಂದಾಪುರ, ಜ. 22: ಕಂದಾವರ ಗ್ರಾಮದ ಸಟ್ವಾಡಿ ಎಂಬಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕುಂದಾಪುರ ಗ್ರಾಮಾಂತರ ಪೊಲೀಸರು ಎರಡನೆ ದಿನದಲ್ಲಿ ಅದೇ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಪ್ಪುಂದ ಮಯ್ಯರಕೇರಿಯ ಶ್ರೀಧರ್ (32) ಹಾಗೂ ಆತನ ಪತ್ನಿ ಸ್ವಾತಿ (26) ಬಂಧಿತ ಆರೋಪಿಗಳು. ಸಟ್ವಾಡಿಯ ದಿನಕರ ಶೆಟ್ಟಿ ಎಂಬವರು ಜ. 20ರಂದು ಸಂಜೆ 6.30ಕ್ಕೆ ಮನೆಗೆ ಬೀಗ ಹಾಕಿ ಸಂಬಂಧಿಕರ ಸಮಾರಂಭಕ್ಕಾಗಿ ಕೋಟೇಶ್ವರ ಹಾಲ್‌ಗೆ ತೆರಳಿದ್ದು, ರಾತ್ರಿ 10ಗಂಟೆಗೆ ಮನೆಗೆ ಮರಳಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿತ್ತೆನ್ನಲಾಗಿದೆ.

ಈ ಮಧ್ಯಾವಧಿಯಲ್ಲಿ ದಿನಕರ ಶೆಟ್ಟಿ ಮನೆಯಲ್ಲಿ ಕೆಲಸಕ್ಕಿದ್ದ ಆರೋಪಿ ದಂಪತಿ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಾಪಾಟಿನಲ್ಲಿದ್ದ ಒಂದು ವಜ್ರದ ಕರಿಮಣಿ ಸರ, ನಾಲ್ಕು ಚಿನ್ನದ ಬಳೆಗಳು, ಒಂದು ಚಿನ್ನದ ಸರ ಮತ್ತು 36 ಸಾವಿರ ರೂ. ನಗದು ಸೇರಿದಂತೆ ಒಟ್ಟು 3.56 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾಗಿದ್ದರು.

ಈ ಬಗ್ಗೆ ಜ. 21ರಂದು ದಿನಕರ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ. ನಿಂಬರ್ಗಿ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಮತ್ತು ಕುಂದಾಪುರ ವೃತ್ತ ನಿರೀಕ್ಷಕ ಡಿ.ಆರ್.ಮಂಜಪ್ಪ ರಚಿಸಿದ ಕುಂದಾಪುರ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಶ್ರೀಧರ್ ನಾಯ್ಕಾ ನೇತೃತ್ವ ತಂಡ ಆರೋಪಿಗಳನ್ನು ಮಂಗಳವಾರ ಬಂಧಿಸಿದೆ.

ಕಳವುಗೈದ ಎಲ್ಲ ಸೊತ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಇಂದು ಸಂಜೆ ವೇಳೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಕಾರ್ಯಾಚರಣೆ ಯಲ್ಲಿ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಶ್ರೀಧರ್, ಸುಜಿತ್ ಕುಮಾರ್, ಪದ್ಮಾವತಿ, ದೀಪಾ, ತಾಂತ್ರಿಕ ವಿಭಾಗದ ಸಿಬ್ಬಂದಿ ಶಿವಾನಂದ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News