ಕಲೆ ಅನುಕರಣೆಗೆ ಸೀಮಿತವಲ್ಲ: ಪ್ರಸನ್ನ ಹೆಗ್ಗೊಡು

Update: 2019-01-22 16:33 GMT

ಮಂಗಳೂರು, ಜ. 22: ಸಾಮಾಜಿಕ ವ್ಯವಸ್ಥೆಯನ್ನು ಉನ್ನತೀಕರಿಸುವ ನೆಲೆಯಲ್ಲಿ ಧರ್ಮ ಹಾಗೂ ಕಲಾ ಕ್ಷೇತ್ರಗಳು ಸಂಬಂಧಗಳನ್ನು ಬೆಸೆದುಕೊಂಡು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿವೆ. ಆದರೆ ಕಲೆ ಅನುಕರಣೆಗೆ ಮಾತ್ರ ಸೀಮಿತವಲ್ಲ ಎಂದು ಹಿರಿಯ ವಿದ್ವಾಂಸ ಪ್ರಸನ್ನ ಹೆಗ್ಗೊಡು ಅಭಿಪ್ರಾಯಪಟ್ಟರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಂತೂರಿನ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಮಂಗಳವಾರ ಪ್ರದಾನಿಸಲಾದ ‘ಸಂದೇಶ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಧರ್ಮ ಹಾಗೂ ಕಲೆಗಳ ಮಧ್ಯೆ ಅವಿನಾಭಾವ ಸಂಬಂಧಗಳಿವೆ. ಎರಡೂ ಕ್ಷೇತ್ರಗಳು ಸಾಮಾಜಿಕವಾಗಿ ಮಹತ್ವದ ಬದಲಾವಣೆ ಹಾಗೂ ಜವಾಬ್ದಾರಿಯ ಕ್ಷೇತ್ರಗಳಾಗಿವೆ. ಕಲೆ ಹಾಗೂ ಧರ್ಮದ ನಡುವಿನ ಸಂಬಂಧವನ್ನು ಇತ್ತೀಚಿನ ದಿನಗಳಲ್ಲಿ ತಪ್ಪಾಗಿ ಗ್ರಹಿಸಲಾಗುತ್ತಿದೆ. ಇದು ವಿಷಾದಕರ ಸಂಗತಿ. ಧರ್ಮಗುರು ಮಾಡುವ ಸಮಾಜ ಸುಧಾರಣೆಯ ಕಾರ್ಯ ಹಾಗೂ ಕಲಾವಿದನ ಸಮಾಜ ಜಾಗೃತಿಯೂ ಪರಸ್ಪರ ಸಂಬಂಧ ಬೆಸೆದುಕೊಳ್ಳುವ ಅಗತ್ಯವಿದೆ ಎಂದರು.

ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು ಹಾಗೂ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಅ.ವಂ.ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಾಧ್ಯಕ್ಷರಾದ ಅ.ವಂ.ಪೀಟರ್ ಪಾವ್ಲ್ ಸಲ್ಡಾನ್ಹಾ ಮುಖ್ಯ ಅತಿಥಿಗಳಾಗಿದ್ದರು.

ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ.ಡಿಸೋಜ ಪ್ರಸ್ತಾವಿಸಿದರು. ಸಂದೇಶ ಪ್ರತಿಷ್ಠಾನದ ವಿಶ್ವಸ್ತರಾದ ರೊಯ್ ಕ್ಯಾಸ್ಟಲಿನೋ, ಕಾನ್ಸೆಪ್ಟಾ ಆಳ್ವ, ಚಂದ್ರಕಲಾ ನಂದಾವರ ಮತ್ತಿತರರು ಉಪಸ್ಥಿತರಿದ್ದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ನೆಲ್ಸನ್ ಪ್ರಕಾಶ್ ದಲ್ಮೇದ ಸ್ವಾಗತಿಸಿದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಂದೇಶ ಪ್ರಶಸ್ತಿ ಪುರಸ್ಕೃತರು

ಪ್ರಸನ್ನ ಹೆಗ್ಗೊಡು- ಸಂದೇಶ ಸಾಹಿತ್ಯ ಪ್ರಶಸ್ತಿ
ಮಂಜಮ್ಮ ಜೋಗತಿ- ಸಂದೇಶ ಕಲಾ ಪ್ರಶಸ್ತಿ
ಬಿ.ಎಂ.ಹನೀಫ್ - ಸಂದೇಶ ಮಾಧ್ಯಮ ಪ್ರಶಸ್ತಿ
ಬಿ.ಎಂ.ರೋಹಿಣಿ- ಸಂದೇಶ ಶಿಕ್ಷಣ ಪ್ರಶಸ್ತಿ
ವಂ.ಬೆನ್ ಬ್ರಿಟ್ಟೊ ಪ್ರಭು -ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ
ವಂ.ಟೆಜಿ ಥೋಮಸ್ ನಿರ್ದೇಶಕರು ಸ್ನೇಹಸದನ್ ಹಾಗೂ ಭ.ಜಾನ್ಸಿ ನಿರ್ದೇಶಕರು ಜೀವದಾನ್ ಸಂಸ್ಥೆ- ಸಂದೇಶ ವಿಶೇಷ ಪ್ರಶಸ್ತಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News