ರಜತ ಸಂಭ್ರಮ ಸಮಾವೇಶದಂದು ಅಸಮರ್ಪಕ ಪಾರ್ಕಿಂಗ್ ಆರೋಪ: ಪ್ರಕರಣ ದಾಖಲು

Update: 2019-01-22 16:28 GMT

ಮಂಗಳೂರು, ಜ.22: ಡಾ. ಎಂ. ಎನ್. ರಾಜೇಂದ್ರಕುಮಾರ್ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ 25 ವರ್ಷಗಳ ಸೇವೆಯ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶದಂದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ವಿವಿಧ ವಾಹನಗಳಲ್ಲಿ ನಗರಕ್ಕೆ ಕರೆತಂದಿದ್ದು, ವಾಹನಗಳಿಗೆ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸದಿದ್ದರಿಂದ ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಜ.19ರಂದು ನಗರದ ಫುಟ್‌ಬಾಲ್ ಮೈದಾನ ಹಾಗೂ ನೆಹರೂ ಮೈದಾನದಲ್ಲಿ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಕಾರ್ಯಕ್ರಮ ನಡೆದಿತ್ತು. ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಲ್ಲಿ ಆಯೋಜಕರು ವಿಫಲರಾಗಿದ್ದರು. ಜೊತೆಗೆ ಚಾಲಕರಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯ ಮಾಹಿತಿ ನೀಡದೇ ಎಸ್‌ಸಿಡಿಸಿಸಿ ಬ್ಯಾಂಕ್ ಕಚೇರಿಯಿಂದ ಹಂಪನಕಟ್ಟೆ ಜಂಕ್ಷನ್ ಮೂಲಕ ನೆಹರೂ ಮೈದಾನಕ್ಕೆ ಮೆರವಣಿಗೆ ನಡೆಸಿ ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ್ದರು ಎಂದು ದೂರಲಾಗಿದೆ.

ಇದರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ತುರ್ತು ಸೇವಾ ವಾಹನಗಳಿಗೆ, ರೋಗಿಗಳ ಓಡಾಟಕ್ಕೆ ಹಾಗೂ ಕಾರ್ಯಕ್ರಮದ ಸುತ್ತಮುತ್ತ ಇರುವ ಎಲ್ಲ ಕಚೇರಿಗಳ ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ, ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ನಿರತರಾಗಿರುವ ಜನ ಸಾಮಾನ್ಯರಿಗೆ, ವ್ಯಾಪಾರಿಗಳಿಗೆ ಅಡಚಣೆ ಉಂಟಾಗಿತ್ತು ಎಂದು ಆರೋಪಿಸಿ ಮಂಗಳೂರು ಸಂಚಾರ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರು ದೂರು ದಾಖಲಿಸಿದ್ದಾರೆ.

ಸಮಾವೇಶ ಆಯೋಜಕರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 341(ಸಾರ್ವಜನಿಕ ಸಂಯಮ ಮೀರುವುದು), ಕಲಂ 188 (ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು), 283 (ಸಾರ್ವಜನಿಕರ ಸಂಚಾರಕ್ಕೆ ಅಡಚಣೆ), 290 (ಸಾರ್ವಜನಿಕರಿಗೆ ವಿನಾಕಾರಣ ಉಪದ್ರವ ನೀಡುವುದು) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News