ಗೋವಾ ಸಮುದ್ರದಲ್ಲಿ ಡಿಸೇಲ್ ವದಂತಿ: ಪೊಲೀಸರಿಂದ ಪರಿಶೀಲನೆ

Update: 2019-01-22 16:40 GMT

ಉಡುಪಿ, ಜ. 22: ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಗೋವಾ ರಾಜ್ಯದ ಸಮುದ್ರ ಮೇಲ್ಭಾಗದಲ್ಲಿ ಡಿಸೇಲ್ ಅಂಶ ಕಂಡುಬಂದಿರುವ ಸುದ್ದಿ ಹರಡುತ್ತಿದ್ದ ಹಿನ್ನೆಲೆ ಯಲ್ಲಿ ಉಡುಪಿ ಪೊಲೀಸ್ ತಂಡ ಗೋವಾಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಬಗ್ಗೆ ತಿಳಿದುಬಂದಿದೆ.

ಗೋವಾ ರಾಜ್ಯದ ಬೇತುಲ್ ಎಂಬಲ್ಲಿ ಸಮುದ್ರದ ಆಳದಿಂದ ಡಿಸೇಲ್ ಮೇಲಕ್ಕೆ ಬರುತ್ತಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಡು ತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿಯ ನಾಲ್ಕು ಮಂದಿಯ ಪೊಲೀಸ್ ತಂಡ ನಿನ್ನೆ ರಾತ್ರಿ ಹೊರಟು ಇಂದು ಬೆಳಗ್ಗೆ ಗೋವಾದ ಬೇತುಲ್‌ನಲ್ಲಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಗೋವಾದ ಕೋಸ್ಟ್ ಗಾರ್ಡ್ ಬೋಟಿನ ಮೂಲಕ ಶೋಧ ನಡೆಸಿದ್ದು, ಅಂತಹ ಯಾವುದೇ ಸುಳಿವು, ಕುರುಹುಗಳು ಕಂಡುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಿ.13ರಂದು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟ ಸುವರ್ಣ ತ್ರಿಭುಜ ಬೋಟು ಡಿ.14ರಂದು ಬೇತುಲ್‌ನಲ್ಲಿ ಮೀನುಗಾರಿಕೆ ನಡೆಸಿ ಮುಂದಕ್ಕೆ ತೆರಳಿದ ಮಾಹಿತಿ ಲಭ್ಯವಾಗಿದೆ. ಆದುದರಿಂದ ಬೈತುಲ್ ಪ್ರದೇಶದಲ್ಲಿ ಅಂತಹ ಯಾವುದೇ ಅವಘಡ ಸಂಭವಿಸಲು ಸಾಧ್ಯವಿಲ್ಲ ಎಂದು ತನಿಖೆ ನಡೆಸಿದ ಪೊಲೀಸ್ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News