ತಾಲಿಬಾನ್ ದಾಳಿಯಲ್ಲಿ ಕನಿಷ್ಠ 100 ಭದ್ರತಾ ಸಿಬ್ಬಂದಿ ಸಾವು

Update: 2019-01-22 17:13 GMT

ಕಾಬೂಲ್, ಜ. 22: ಮಧ್ಯ ಅಫ್ಘಾನಿಸ್ತಾನದ ಮೈದಾನ್ ವರ್ದಕ್ ರಾಜ್ಯದ ಸೇನಾ ಆವರಣವೊಂದರ ಒಳಗೆ ಸೋಮವಾರ ತಾಲಿಬಾನ್ ನಡೆಸಿದ ದಾಳಿಯಲ್ಲಿ 100ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

 ಈ ಘರ್ಷಣೆಯ ವೇಳೆ ತಾಲಿಬಾನ್ ಉಗ್ರರನ್ನೂ ಕೊಲ್ಲಲಾಗಿದೆ ಎಂದು ಕಾಬೂಲ್‌ನಲ್ಲಿರುವ ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ‘ಅರಬ್ ನ್ಯೂಸ್’ಗೆ ಹೇಳಿದ್ದಾರೆ.

ಮೈದಾನ್ ವರ್ದಕ್ ರಾಜ್ಯದಲ್ಲಿ ಗುಪ್ತಚರ ಸಂಸ್ಥೆ ಬಳಸುತ್ತಿರುವ ಆವರಣಕ್ಕೆ ಸ್ಫೋಟಕಗಳು ತುಂಬಿದ್ದ ವಾಹನವೊಂದನ್ನು ಆತ್ಮಹತ್ಯಾ ಬಾಂಬರ್ ಓರ್ವ ನುಗ್ಗಿಸುವುದರೊಂದಿಗೆ ಸೋಮವಾರದ ದಾಳಿ ಆರಂಭಗೊಂಡಿತು.

ಬಳಿಕ ಇಬ್ಬರು ಬಂದೂಕುಧಾರಿಗಳು ಆವರಣ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದರು.

ವಿಫಲಗೊಳ್ಳುತ್ತಿರುವ ಸಂಧಾನ; ವಿಜೃಂಭಿಸುತ್ತಿರುವ ಹಿಂಸೆ

17 ವರ್ಷಗಳ ಅಫ್ಘಾನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ನೇತೃತ್ವದಲ್ಲಿ ನಡೆಯುತ್ತಿರುವ ಮಾತುಕತೆಗಳು ವಿಫಲಗೊಳ್ಳುತ್ತಿವೆ ಎಂಬ ವರದಿಗಳ ಬೆನ್ನಿಗೇ ಈ ಭೀಕರ ದಾಳಿ ನಡೆದಿದೆ.

ಸಾಮಾನ್ಯವಾಗಿ ಅಫ್ಘಾನಿಸ್ತಾನದ ಹೆಪ್ಪುಗಟ್ಟುವ ಚಳಿಗಾಲದ ತಿಂಗಳುಗಳಲ್ಲಿ ಹಿಂಸೆಗೆ ಕೊಂಚ ವಿರಾಮ ಸಿಗುತ್ತದೆ. ಆದರೆ, ಶಾಂತಿ ಮಾತುಕತೆಗಳು ‘ಬಿಕ್ಕಟ್ಟಿ’ನ ಹಂತವನ್ನು ತಲುಪುತ್ತಿದೆ ಎಂಬುದಾಗಿ ವಿಶ್ಲೇಷಕರು ಸೂಚನೆ ನೀಡುತ್ತಿರುವಂತೆಯೇ, ಇತ್ತೀಚಿನ ವಾರಗಳಲ್ಲಿ ತಾಲಿಬಾನ್ ಆಕ್ರಮಣ ವಿಜೃಂಭಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News