‘ಬೇಟಿ ಬಚಾವೊ, ಬೇಟಿ ಪಡಾವೊ’ ಯೋಜನೆಯ ಶೇ.56 ನಿಧಿ ಜಾಹಿರಾತಿಗೆ ಬಳಕೆ

Update: 2019-01-22 17:18 GMT

ಹೊಸದಿಲ್ಲಿ,ಜ.22: 2014-15ರಿಂದ ‘ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಯ ಶೇ.56 ನಿಧಿಯನ್ನು ಮಾಧ್ಯಮ ಸಂಬಂಧಿ ಚಟುವಟಿಕೆಗಳಿಗೆ ನೀಡಲು ಬಳಸಲಾಗಿದೆ. ಶೇ.25ಕ್ಕೂ ಕಡಿಮೆ ಮೊತ್ತವನ್ನು ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಹಂಚಲಾಗಿದೆ ಎಂದು ಸರಕಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

2015ರಲ್ಲಿ ಜಾರಿಗೆ ತರಲಾದ ಯೋಜನೆಯು ಭಾರತದಲ್ಲಿ ಕುಸಿಯುತ್ತಿರುವ ಲಿಂಗಾನುಪಾತ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶವನ್ನು ಹೊಂದಿತ್ತು. ಈ ಯೋಜನೆಗಾಗಿ ಸರಕಾರ ಕಳೆದ ಐದು ವರ್ಷಗಳಲ್ಲಿ 648 ಕೋಟಿ ರೂ. ಮೀಸಲಿಟ್ಟಿದ್ದು, ಅದರಲ್ಲಿ 364.66 ಕೋಟಿ ರೂ.ವನ್ನು ಜಾಹೀರಾತಿಗೆ ವೆಚ್ಚ ಮಾಡಿದೆ. ಕೇವಲ 159.18 ಕೋಟಿ ರೂ.ವನ್ನು ರಾಜ್ಯ ಮತ್ತು ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಸಚಿವ ವೀರಂದ್ರ ಕುಮಾರ್ ಜನವರಿ 4ರಂದು ಲೋಕಸಭೆಗೆ ತಿಳಿಸಿದ್ದಾರೆ.

2018-19ರಲ್ಲಿ ಕೇಂದ್ರ ಈ ಯೋಜನೆಗಾಗಿ 280 ಕೋಟಿ ರೂ. ಮೀಸಲಿಟ್ಟಿದ್ದು, ಅದರಲ್ಲಿ 155.71 ಕೋಟಿ ರೂ. ಜಾಹೀರಾತಿಗೆ ಮತ್ತು 70.63 ಕೋಟಿ ರೂ. ರಾಜ್ಯ ಮತ್ತು ಜಿಲ್ಲೆಗಳಿಗೆ ಹಂಚಲಾಗಿದೆ. 53.66 ಕೋಟಿ ರೂ.ವನ್ನು ಬಿಡುಗಡೆ ಮಾಡಲು ಸರಕಾರ ವಿಫಲವಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ. ಕಳಪೆ ಅನುಷ್ಠಾನ, ನಿಧಿಯ ಅಸಮರ್ಪಕ ಬಳಕೆಯಿಂದ ಈ ಯೋಜನೆ ವಿಫಲವಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರ್, ದೇಶದ ಎಲ್ಲ 640 ಜಿಲ್ಲೆಗಳನ್ನು 2018-19ರಿಂದ ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News