13 ಕ್ಯಾಂಟೀನ್ ವೈಟರ್ ಹುದ್ದೆಗೆ ಪದವೀಧರರ ಸಹಿತ 7,000 ಜನರಿಂದ ಅರ್ಜಿ

Update: 2019-01-22 17:21 GMT

ಮುಂಬೈ, ಜ. 22: ಮಹಾರಾಷ್ಟ್ರದ ಸೆಕ್ರೇಟರಿಯೇಟ್ ಕ್ಯಾಂಟೀನ್‌ನ 13 ವೈಟರ್ ಹುದ್ದೆಗೆ 7000ಕ್ಕೂ ಅಧಿಕ ಅರ್ಜಿ ಬಂದಿದೆ. ಇವರಲ್ಲಿ ಹೆಚ್ಚಿನವರು ಪದವೀಧರರು. ಇದು ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಬಹಿರಂಗಪಡಿಸಿದೆ.

ಈ ಉದ್ಯೋಗದ ಜಾಹೀರಾತಿನಲ್ಲಿ ಅಭ್ಯರ್ಥಿಗಳು ನಾಲ್ಕನೇ ತರಗತಿ ಶಿಕ್ಷಣ ಪಡೆದಿದ್ದರೆ ಸಾಕು ಎಂದು ಹೇಳಲಾಗಿತ್ತು. ಯುವಕರಿಗೆ ಸಾಕಷ್ಟು ಉದ್ಯೋಗ ಸೃಷ್ಟಿಸಲು ಮಹಾರಾಷ್ಟ್ರ ಸರಕಾರ ವಿಫಲವಾಗಿರುವ ಲಕ್ಷಣ ಇದು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲ್ಲಿಕ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಯಾವುದೇ ಹೊಸ ಕೈಗಾರಿಕೆ ಬಂದಿಲ್ಲ. ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿವೆ. ಸರಳವಾಗಿ ಹೇಳುವುದಾದರೆ ಯಾವುದೇ ಹೊಸ ಯೋಜನೆ ಇಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಪರಿಣಾಮ ಜನರು ತೊದರೆಗೊಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಈ ಆರೋಪವನ್ನು ಬಿಜೆಪಿ ಸರಕಾರ ನಿರಾಕರಿಸಿದೆ. ‘‘ಯಾವುದೇ ಹುದ್ದೆಗೆ ಯಾರೊಬ್ಬರು ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾವು ಅನೇಕ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ. ಅದರ ಸಂಖ್ಯೆ ಕೂಡ ಉತ್ತಮವಾಗಿದೆ’’ ಎಂದು ಮಹಾರಾಷ್ಟ್ರದ ಹಣಕಾಸು ಸಚಿವ ಸುಧೀರ್ ಮುಂಗಂಟಿವಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News