ನವಯುಗ ವಿರುದ್ಧ ಧರಣಿ: ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರ

Update: 2019-01-23 11:33 GMT

ಪಡುಬಿದ್ರೆ, ಜ. 22: ನವಯುಗ ಕಂಪೆನಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಿ ಮಾಡುವ ಕ್ರಮವನ್ನು ವಿರೋಧಿಸಿ ಪಡುಬಿದ್ರಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 18ನೇ ದಿನಕ್ಕೆ ಕಾಲಿಟ್ಟಿದೆ.

ಟೋಲ್ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ. 23ರಂದು ಬೆಳಗ್ಗೆ 10 ಗಂಟೆಗೆ ಸಭೆಯನ್ನು ಕರೆಯಲಾಗಿದೆ.

ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಮಾತನಾಡಿ, ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಿಯಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ವಿನಾಯಿತಿ ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಟೋಲ್ ವಿರೋಧಿ ಹೋರಾಟಗಾರ ಮುಖಂಡ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ನವಯುಗ ನಿರ್ಮಾಣ ಕಂಪೆನಿಯು ಸುಳ್ಳು ಸುದ್ದಿಗಳನ್ನು ಹರಡಿ ಪ್ರತಿಭಟನಕಾರರನ್ನು ಒಡೆಯಲು ತನ್ನಿಸುತ್ತಿದೆ. ಜಿಲ್ಲಾಡಳಿತವು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ಕಾಯಕವನ್ನು ಕೈಬಿಡಬೇಕು. ಹೆಜಮಾಡಿ ಟೋಲ್ ಪ್ಲಾಝಾದಲ್ಲೂ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಪೂರ್ಣ ಸುಂಕ ವಿನಾಯತಿಯನ್ನು ನವಯುಗವು ಅನುಸರಿಸಬೇಕು. ಇದಕ್ಕಾಗಿ ತಮ್ಮ ಹೋರಾಟ ಮುಂದುವರಿಯುವುದಾಗಿ ಹೇಳಿದರು.

ಪಡುಬಿದ್ರೆ ಜನಜಾಗೃತಿ ಸಮಿತಿ ಅಧ್ಯಕ್ಷ ನವೀನ್‍ಚಂದ್ರ ಶೆಟ್ಟಿ, ಕರವೇ ಕಾಪು ತಾಲೂಕು ಘಟಕದ ಅಧ್ಯಕ್ಷ ಸೈಯ್ಯದ್ ನಿಝಾಮ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷ ಹಸನ್ ಬಾವ, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ರಮೀಝ್ ಹುಸೈನ್, ಎಸ್‍ವೈಎಸ್ ಜಿಲ್ಲಾಧ್ಯಕ್ಷ ಹಾಜಿ ಹಮ್ಮಬ್ಬ ಮೊಯಿದಿನ್, ಆಸಿಫ್ ಆಪದ್ಬಾಂಧವ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News