ಸಾರ್ವಜನಿಕರ ಬೇಡಿಯಂತೆ ಶಿರಾಲಿ ಹೆದ್ದಾರಿ ಅಗಲಿಕರಣ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ

Update: 2019-01-22 18:24 GMT

ಭಟ್ಕಳ, ಜ. 22: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ಜರಗಿಸಲಾಗುವುದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಭರವಸೆ ನೀಡಿದರು. 

ಅವರು ಸೋಮವಾರ ಶಿರಾಲಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ದೂರುಗಳನ್ನು ಆಲಿಸಿ ನಂತರ ಮಾತನಾಡಿದರು. 

ಶಿರಾಲಿ ಜನರ ಬೇಡಿಕೆಯಗಳು ನ್ಯಾಯಯುತವಾಗಿದ್ದು ಹೆದ್ದಾರಿಯನ್ನು 30 ರ ಬದಲು 45ಮೀಟರ್ ವಿಸ್ತರಿಸಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು ಹೆದ್ದಾರಿ ಚಿಕ್ಕದಾಗಿರುವುದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆಗಳಿದ್ದು 45ಮೀಟರ್ ಅಗಲೀಕರಣಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ಅಧಿಕಾರ ರಾಜ್ಯಸರ್ಕಾರಕ್ಕಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಯಾವುದೆ ಕಾರಣಕ್ಕೂ ಹೆದ್ದಾರಿ ಅಗಲೀಕರಣದಲ್ಲಿ ಕಡಿತಗೊಳಿಸುವುದಿಲ್ಲ ಎಂದರು. 

ಶಾಸಕ ಸುನಿಲ್ ನಾಯ್ಕ ಮಾತನಾಡಿ, ಶಿರಾಲಿ ಪ್ರದೇಶವು ದೇಶದಲ್ಲಿ ಖ್ಯಾತಿಯನ್ನು ಹೊಂದಿದ್ದು ಇಲ್ಲಿನ ಚಿತ್ರಾಪುರ ಮಠ ಹಾಗೂ ಅಳ್ವೆಕೋಡಿ ದೇವಸ್ಥಾನಕ್ಕೆ ನೂರಾರು ಭಕ್ತರು ಬರುತ್ತಾರೆ ಆದ್ದರಿಂದ ಈ ಭಾಗದಲ್ಲಿ ಹೆದ್ದಾರಿ ಚಿಕ್ಕದಾಗಿದ್ದರೆ ಮುಂದೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಅಪಘಾತಗಳು ಹೆಚ್ಚುವ ಸಂಭವವಿದೆ ಎಂದ ಅವರು ಅಧಿಕಾರಿಗಳು ಸಾರ್ವಜನಿಕರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಸಂದರ್ಭ ದಲ್ಲಿ ಶಿರಾಲಿ ಪಂಚಾಯತ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಹಿರಿಯ ಕಾಂಗ್ರೇಸ್ ಮುಖಂಡ ರಾಮಾ ಮೊಗೇರ್, ಆರ್.ಕೆ.ನಾಯ್ಕ ಮುಂತಾದವರು ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸಚಿವರ ಮುಂದೆ ವಿವರಿಸಿದರು. 

ಪಂಚಾಯತ್ ಉಪಾಧ್ಯಕ್ಷೆ ಸುನಿತಾ ಹೆರೂರಕರ್, ಸದಸ್ಯರಾದ ಮಾಲತಿ ದೇವಾಡಿಗ, ಬಿಜೆಪಿ ಅಧ್ಯಕ್ಷ ರಾಜೇಶ ನಾಯ್ಕ, ದಿನೇಶ ನಾಯ್ಕ ಮುಂಡಳ್ಳಿ, ಸುಬ್ರಾಯ ದೇವಾಡಿಗ, ಭಾಸ್ಕರ್ ದೈಮನೆ, ಮೋಹನ್ ದೇವಾಡಿಗ, ರವಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News