ಮೀನುಗಾರರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ನೀಡಿದ ಕೇಂದ್ರ ಸಚಿವ

Update: 2019-01-22 18:27 GMT

ಭಟ್ಕಳ, ಜ. 22: ಡಿಸೆಂಬರ್ 15ರಂದು ಮೀನುಗಾರಿಕೆಯನ್ನು ಮಾಡುತ್ತಿರುವಾಗ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನಲ್ಲಿದ್ದು ನಾಪತ್ತೆಯಾಗಿದ್ದ ಅಳ್ವೇಕೋಡಿಯ ಹರೀಷ್ ಮೊಗೇರ ಹಾಗೂ ಬೆಳ್ನಿಯ ರಮೇಶ  ಮೊಗೇರ ಅವರ ಮನೆಗೆ ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಭೇಟಿ ನೀಡಿ ಸಾಂತ್ವನ ಹೇಳಿದರು. 

ಮೀನಗಾರಿಕೆಗೆ ತೆರಳಿದ್ದ ಬೋಟು ನಾಪತ್ತೆಯಾಗಿರುವ ಸಂಗತಿ ತಿಳಿದೊಡನೆಯೇ ಕೇಂದ್ರದ ಸಚಿವರಿಗೆ ಪತ್ರ ಬರೆದು ತಕ್ಷಣದ ಕ್ರಮಕ್ಕೆ ಕೋರಿದ್ದೇನೆ.  ದೆಹಲಿಯಲ್ಲಿ ಕೇಂದ್ರ ಸರಕಾರದ ವತಿಯಿಂದ ನಾಪತ್ತೆಯಾದ ಬೋಟ್ ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳೂ ಸಾಗಿವೆ. ಈಗಾಗಲೇ ನೇವಿ, ಕೋಸ್ಟಗಾರ್ಡ ಸಹಾಯವನ್ನು ಕೂಡಾ ಪಡೆಯಲಾಗಿದೆ.  ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೂ ಹುಡುಕುವ ಪ್ರಯತ್ನ ಸಾಗಿದ್ದು ಎಲ್ಲಾ ವ್ಯವಸ್ಥೆ ಕೇಂದ್ರ ಸರಕಾರ ಮಾಡಿದೆ ಎಂದರು.

ಸಿದ್ಧಗಂಗಾ ಮಠದ ಶ್ರೀಗಳ ನಿಧನಕ್ಕೆ ಸಂತಾಪ: ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಷರಾದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು ಸ್ವಾಮೀಜಿಯವರು ಅನೇಕ ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಯಾವುದೇ ಜಾತಿ, ಮತ, ಪಂಥವೆನ್ನದೇ ತಮ್ಮ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದ ಅವರು ಲಕ್ಷಾಂತರ ಜನತೆಗೆ ದಾರಿ ದೀಪವಾಗಿದ್ದಾರೆ ಎಂದರು.

ಭಟ್ಕಳದಲ್ಲಿ ನಿಯೋಜಿತ ಕಾರ್ಯಕ್ರಮಗಳನ್ನು ರದ್ದು ಪಡಿಸಿ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ತಾವು ತುಮಕೂರಿಗೆ ತೆರಳುತ್ತಿರುವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News