ಜ.26-28: ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

Update: 2019-01-23 12:00 GMT

ಮಂಗಳೂರು, ಜ.23: ತೋಟಗಾರಿಕೆ ಇಲಾಖೆ, ದ.ಕ. ಜಿಪಂ, ದ.ಕ. ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘದ ಸಹಭಾಗಿತ್ವದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಜ.26ರಿಂದ 28ರವರೆಗೆ ಫಲಪುಷ್ಪಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯ್ಕ ಹೇಳಿದ್ದಾರೆ.

ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತೀ ದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಫಲಪುಷ್ಪಪ್ರದರ್ಶನವಿದೆ. ಹಿರಿಯರಿಗೆ 20 ರೂ. ಮತ್ತು ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳಿಗೆ, ವಿಕಲಚೇತನರಿಗೆ, ಭಿನ್ನಸಾಮರ್ಥ್ಯದ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದರು.

ಜ.26ರಂದು ಬೆಳಗ್ಗೆ 10:30ಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಫಲಪುಷ್ಪ ಪ್ರದರ್ಶನವನ್ನು ಮತ್ತು ಹೂ ವಿನ್ಯಾಸ ಮಾದರಿಯನ್ನು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ಉದ್ಘಾಟಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು.

ತೋಟಗಾರಿಕೆ ಇಲಾಖೆಯು ಇತರ ಸರಕಾರಿ ಇಲಾಖೆಗಳು, ಬ್ಯಾಂಕ್‌ಗಳು, ಸಂಘಸಂಸ್ಥೆಗಳು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಈ ಫಲಪುಷ್ಪಪ್ರದರ್ಶನವನ್ನು ಏರ್ಪಡಿಸಿ ಜಿಲ್ಲೆಯಲ್ಲಿ ತೋಟಗಾರಿಕಾ ಚಟುವಟಿಕೆ ಹಾಗೂ ತೋಟಗಾರಿಕಾ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಉದ್ದೇಶ ಹೊಂದಿದೆ. ಅಲ್ಲದೆ ತೋಟಗಾರಿಕೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ, ಸಾರ್ವಜನಿಕ ನೈರ್ಮಲ್ಯ, ಗ್ರಾಮ, ನಗರಗಳನ್ನು ಸುಂದರಗೊಳಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ತೋಟಗಾರಿಕೆಗೆ ಉತ್ತೇಜನ ನೀಡಲು ಬಯಸಿದೆ.

*ಫಲಪುಷ್ಪ ಪ್ರದರ್ಶನದಲ್ಲಿ ಬಣ್ಣ ಬಣ್ಣದ ಕಾನೇರ್ಷನ್ ಮತ್ತು ಗುಲಾಬಿ ಹೂವಿನಿಂದ ಅಲಂಕರಿಸಿದ ‘ಸಮುದ್ರದಲ್ಲಿ ತೇಲುವ ಹಡಗು’ ಹಾಗೂ ಇನ್ನಿತರ ಮಾದರಿಗಳು/ಆಕೃತಿಗಳನ್ನು ಕಾಣಬಹುದಾಗಿದೆ. ಅಲ್ಲದೆ ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಕ ಹೂಗಳ ಟೋಪಿಯಾರಿ ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳ, ಅಂಥೂರಿಯಂ, ಆರ್ಕಿಡ್ ಗಿಡಗಳು ಇನ್ನಿತರೇ ಆಕರ್ಷಣೀಯವಾದ ಗಿಡಗಳ ಪ್ರದರ್ಶನವಿದೆ.

*ವಿವಿಧ ತಾಲೂಕುಗಳಿಂದ ಹಾಗೂ ಇಲಾಖಾ ವಲಯದಲ್ಲಿ ಉತ್ಪಾದಿಸಿದ ತರಕಾರಿ ಸಸಿ ಹಾಗೂ ಹೂವಿನ ಗಿಡಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ವಿವಿಧ ನರ್ಸರಿದಾರರು, ಬೀಜ/ಗೊಬ್ಬರಗಳ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳನ್ನು ತೆರೆಯಲಿದ್ದು, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರರಿಂದ ಉತ್ಪನ್ನಗಳ ಖರೀದಿ ಹಾಗೂ ವೀಕ್ಷಣೆಗೆ ಅವಕಾಶವಿದೆ.

*ಹನಿ ನೀರಾವರಿ ಪ್ರಾತ್ಯಕ್ಷತೆ, ಹೈಡ್ರೋಪೋನಿಕ್ಸ್, ಜೇನು ಸಾಕಣೆ ಮಾದರಿ, ಅಣಬೆ ಮಾದರಿಗಳು ಹಾಗೂ ವಿವಿಧ ಕಟ್ ಪ್ಲವರ್‌ಗಳ ಜೋಡಣೆ ಮತ್ತು ಜೇನು ಬೇಸಾಯ ಬಗ್ಗೆ ಮಾಹಿತಿ ಹಾಗೂ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ, ಕೈತೋಟದ ಪ್ರಾತ್ಯಕ್ಷತೆ, ವಿವಿಧ ಅಭಿವೃದ್ದಿ ಇಲಾಖೆಗಳ ಪ್ರದರ್ಶನದ ಮಳಿಗೆಗಳು ತೆರೆಯಲಿವೆ ಎಂದು ಅವರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News