ಉಡುಪಿ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗಾಗಿ ಬಾಲ್ಯ ವಿವಾಹ ಕುರಿತ ‘ಸಂದಿಗ್ಧ’ ಸಿನೆಮಾ ಪ್ರದರ್ಶನ
ಉಡುಪಿ, ಜ.23: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ, ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದೊಂದಿಗೆ ಬಾಲ್ಯ ವಿವಾಹ ಕುರಿತ ಸುಚೇಂದ್ರ ಪ್ರಸಾದ್ ನಿರ್ದೇಶನದ ‘ಸಂದಿಗ್ಧ’ ಮಕ್ಕಳ ಚಲನಚಿತ್ರ ಪ್ರದರ್ಶನ ವನ್ನು ಉಡುಪಿ ಜಿಲ್ಲೆಯ ಏಳು ಚಿತ್ರಮಂದಿರಗಳಲ್ಲಿ ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಸದಸ್ಯೆ ಡಾ. ವನಿತಾ ತೋರವಿ, ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರಿನ ಒಟ್ಟು ಏಳು ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಗುತ್ತಿದ್ದು, ಜ.21ರ ಪ್ರದರ್ಶನದಲ್ಲಿ 3578 ಮಕ್ಕಳು ಚಿತ್ರವನ್ನು ವೀಕ್ಷಿಸಿದ್ದಾರೆ. ಜ.24 ಮತ್ತು 25ರ ಪ್ರದರ್ಶನದಲ್ಲಿ ಮತ್ತೆ ಒಟ್ಟು ತಲಾ 3578 ಮಕ್ಕಳು ಚಿತ್ರ ವೀಕ್ಷಿಸಲಿರುವರು ಎಂದರು.
ಚಿತ್ರ ಪ್ರದರ್ಶನಕ್ಕೆ ಜ.24ರಂದು ಬೆಳಗ್ಗೆ 8:45ಕ್ಕೆ ಉಡುಪಿ ಅಲಂಕಾರ್ ಚಿತ್ರಮಂದಿರದಲ್ಲಿ ಚಾಲನೆ ನೀಡಲಾಗುವುದು. ಒಂದು ಗಂಟೆ 20 ನಿಮಿಷ ಅವಧಿಯ ಈ ಸಿನೆಮಾ ಎಲ್ಲ ಚಿತ್ರಮಂದಿರಗಳಲ್ಲಿ ಬೆಳಗ್ಗೆ 9ಗಂಟೆಗೆ ಪ್ರದರ್ಶನಗೊಳ್ಳಲಿದೆ. ಈ ಹಿಂದೆ ಚಿತ್ರದ ಪ್ರದರ್ಶನವನ್ನು ಬಿಜಾಪುರ, ಕೊಪ್ಪಳ, ಬಾಗಲಕೋಟೆಯಲ್ಲಿ ನಡೆಸಲಾಗಿದ್ದು, ಮುಂದೆ ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
24ರಂದು ಬೆಳಗ್ಗೆ 10:30ಕ್ಕೆ ಬಾಲ್ಯ ವಿವಾಹ ಕುರಿತ ಜಾಥವನ್ನು ಉಡುಪಿ ಕ್ಲಾಕ್ ಟವರ್‌ನಿಂದ ಸೈಂಟ್ ಸಿಸಿಲೀಸ್ ಶಾಲೆಯವರೆಗೆ ಆಯೋಜಿಸಲಾಗಿದೆ. ಮಧ್ಯಾಹ್ನ 2:30ಕ್ಕೆ ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಪತ್ರ ಕರ್ತರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಏರ್ಪಡಿಸ ಲಾಗಿದೆ. 25ರಂದು ಬೆಳಗ್ಗೆ 11ಗಂಟೆಗೆ ವಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಸರಕಾರಿ ಶಾಲೆಗಳ ಉನ್ನತೀಕರಣ ಕಾರ್ಯಕ್ರಮ ಜರಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ, ಜಿಲ್ಲಾ ಪ್ರಭಾರ ಮಕ್ಕಳ ರಕ್ಷಣಾಧಿಕಾರಿ ವೀಣಾ, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ ಹಾಗೂ ಶಾಲೆಯಿಂದ ದೂರ ಉಳಿದ ಮಕ್ಕಳ ವಿಚಾರದಲ್ಲಿ ಭಾರತವು ಇಡೀ ಜಗತ್ತಿನಲ್ಲಿ ಐದನೆ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ಮೂರು ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೆಲ್ಲವೂ ವಲಸೆ ಕಾರ್ಮಿಕರ ಕುಟುಂಬದಲ್ಲಿ ನಡೆದ ವಿವಾಹ ವಾಗಿವೆ. ಆಯೋಗದಿಂದ ವಲಸೆ ಕಾರ್ಮಿಕರಲ್ಲಿ ಅರಿವು ಮೂಡಿಸುವ ಕೆಲಸ ವನ್ನು ಮಾಡಲಾಗುತ್ತಿದೆ.
- ನಿತಾ ತೋರವಿ, ಆಯೋಗದ ಸದಸ್ಯೆ.