ಜ. 29-ಫೆ.4ರವರೆಗೆ ಅಂಬಲಪಾಡಿಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರ
ಉಡುಪಿ, ಜ.23: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್‌ಎಸ್‌ಎಸ್ ಕೋಶ ಮತ್ತು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಜ. 29ರಿಂದ ಫೆ.4ರವರೆಗೆ ಅಂಬಲಪಾಡಿ ಪ್ರಗತಿ ಸೌಧದಲ್ಲಿ ಆಯೋಜಿಸಲಾಗಿದೆ.
ಜ. 29ರಂದು ಸಂಜೆ 4 ಗಂಟೆಗೆ ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಯುವ ಸಬ ಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಈಶ್ವರ ಪಿ. ಮೊದಲಾದವರು ಭಾಗವಹಿಸಲಿರುವರು.
ಶಿಬಿರದಲ್ಲಿ ಗುಜರಾತ್, ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಒಟ್ಟು 150ಕ್ಕೂ ಅಧಿಕ ಎನ್ನೆಸ್ಸೆಸ್ ಸ್ವಯಂ ಸೇವಕರು ಹಾಗೂ ಕಾರ್ಯಕ್ರಮ ಅಧಿಕಾರಿಗಳು ಪಾಲ್ಗೊಳ್ಳಲಿರುವರು.
ಜ.30ರಂದು ಬೆಳಗ್ಗೆ 9:30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಸಾಂಸ್ಕೃತಿಕ ಜಾಥಾ ನಡೆಯಲಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಲಿದ್ದಾರೆ.ಫೆ.4ರಂದು ಬೆಳಗ್ಗೆ 11ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸ್ವಯಂಸೇವಕರಿಗೆ ಇಲ್ಲಿನ ಸಂಸ್ಕೃತಿಯ ಪರಿಚಯ, ಯೋಗ, ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮ, ಪ್ರಾಚ್ಯ ವಸ್ತುಗಳ ಕೇಂದ್ರಗಳ ಸಂದರ್ಶನ, ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸ, ಮಾದಕ ದ್ರವ್ಯದ ವಿರುದ್ಧ ಅರಿವು ಮೂಡಿಸಲಾಗುವುದು ಎಂದು ಶಿಬಿರದ ಸಂಚಾಲಕ ಪ್ರೊ.ಪ್ರಕಾಶ್ ಕ್ರಮಧಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.