ನವಯುಗ ವಿರುದ್ಧ ಉಪವಾಸ ಸತ್ಯಾಗ್ರಹ ಮುಂದುವರಿಕೆ: ಕರವೇ
ಉಡುಪಿ, ಜ.23: ನವಯುಗ ಕಂಪೆನಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಟೋಲ್‌ಗೇಟ್ ಸುಂಕ ವಸೂಲಾತಿ ವಿರುದ್ಧ ಪಡುಬಿದ್ರೆಯಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿಯ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾದ ಸಭೆಯು ವಿಫಲಗೊಂಡಿದೆ. ಈ ಮೂಲಕ ಜಿಲ್ಲಾಡಳಿತ ಕರವೇ ಮುಖಂಡರಿಗೆ ಅವಮಾನ ಮಾಡಿದೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.7ರಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ಹಾಗೂ ಎರಡು ದಿನಗಳ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗಿತ್ತು. ಜಿಲ್ಲಾಡಳಿತ ಮನವಿಯಂತೆ ಉಪವಾಸ ಸತ್ಯಾ ಗ್ರಹ ಕೈಬಿಟ್ಟು ಇಂದು ಕರೆದ ಸಭೆಗೆ ಹಾಜರಿದ್ದೆವು. ಆದರೆ ಜಿಲ್ಲಾಡಳಿತ ಸಭೆಗೆ ನವಯುಗ ಕಂಪೆನಿಯ ಜವಾಬ್ದಾರಿಯುತ ಅಧಿಕಾರಿಗಳನ್ನು ಕರೆಯದೆ ಕಾಟಾ ಚಾರಕ್ಕೆ ಸಭೆ ನಡೆಸಿದೆ. ಈ ಸಭೆ ಸಂಪೂರ್ಣ ವಿಫಲವಾಗಿದ್ದು, ನಾಳೆಯಿಂದ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಲಾಗುವುದು ಎಂದರು.
ಜಿಲ್ಲೆಯ ನೊಂದಣಿ ವಾಹನಗಳಿಗೆ ಹೆಜಮಾಡಿ ಟೋಲ್‌ನಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕು. ಇಲ್ಲವೇ ಸುರತ್ಕಲ್ ಟೋಲ್‌ನ್ನು ತೆರವುಗೊಳಿಸ ಬೇಕು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈಗಾಗಲೇ ಕೆಡವಿರುವ ಜಾಗದಲ್ಲಿ ಹೊಸ ಬಸ್ ನಿಲ್ದಾಣಗಳನ್ನು ಕೂಡಲೇ ನಿರ್ಮಿಸಬೇಕು. ಕೂಡಲೇ ಸರ್ವಿಸ್ ರಸ್ತೆ ಕಾಮಗಾರಿಯನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ಮುಖಂಡರಾದ ನಿಜಾಮುದ್ದೀನ್, ಜುನೇದ್, ಆಸೀಫ್, ಮುಸ್ತಾಕ್, ಎಸ್‌ಡಿಪಿಐ ಜಿಲ್ಲಾ ಸದಸ್ಯ ನೀಫ್ ಮೂಳೂರು ಉಪಸ್ಥಿತರಿದ್ದರು.