ಧರ್ಮಸ್ಥಳ ಮಹಾಮಸ್ತಕಾಭಿಷೇಕಕ್ಕೆ ಆಗಮಿಸಿದ ಜೈನ ಮುನಿಗಳು

Update: 2019-01-23 14:38 GMT

ಹೆಬ್ರಿ, ಜ. 23: ಶ್ರೀಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿಗೆ ಫೆ.9ರಿಂದ 18ರವರೆಗೆ ನಡೆಯಲಿರುವ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಲು ಉತ್ತರ ಭಾರತದಿಂದ ಕಾಲ್ನಡಿಗೆಯಲ್ಲಿಯೇ ಆಗಮಿಸಿದ ಪರಮಪೂಜ್ಯ ಆಚಾರ್ಯಶ್ರೀ108 ವರ್ಧಮಾನ ಸಾಗರ ಮುನಿಮಹಾರಾಜರು ಸೇರಿದಂತೆ ಜೈನಮುನಿಗಳನ್ನು ಮಂಗಳವಾರ ಸಂಜೆ ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿ ಧಾರ್ಮಿಕ ವಿಧಿವಿಧಾನ ಮತ್ತು ಬಿರುದಾವಳಿಯೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು.

ಮುಂದಿನ ತಿಂಗಳು ನಡೆಯುವ 4ನೇ ಮಹಾಮಸ್ತಕಾಭಿಷೇಕಕ್ಕೆ ಮಾರ್ಗದರ್ಶನ ನೀಡಲು ಇವರೆಲ್ಲರೂ ಉತ್ತರ ಭಾರತದಿಂದ ಕಾಲ್ನಡಿಗೆ ಯಲ್ಲಿಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಆಚಾರ್ಯಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜ ನೇತೃತ್ವದಲ್ಲಿ ಆಗಮಿಸಿರುವ ಜೈನ ಮುನಿಗಳು ಆಗುಂಬೆ ಘಾಟಿ ಇಳಿದು, ಜಿಲ್ಲೆಯ ಗಡಿಪ್ರದೇಶವಾದ ಸೋಮೇಶ್ವರಕ್ಕೆ ಮಂಗಳವಾರ ಸಂಜೆ ಪಾದಾರ್ಪಣೆ ಮಾಡಿದರು.

ಧರ್ಮಸ್ಥಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ಆಚಾರ್ಯ ವರ್ಧಮಾನ ಸಾಗರ ಮುನಿಮಹಾರಾಜರು ಮೂರನೇ ಬಾರಿಗೆ ಪಾಲ್ಗೊಳ್ಳುತ್ತಿ ರುವುದು ವಿಶೇಷವಾಗಿದೆ. ಇದಕ್ಕೆ ಮೊದಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರ ನಿರ್ದೇಶನ ದಂತೆ ಶಿವಮೊಗ್ಗ ಜಿಲ್ಲೆ ಗಡಿಭಾಗವಾದ ಆಗುಂಬೆಯಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಸಂಚಾಲಕರಾದ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ತ್ಯಾಗಿಸೇವಾ ಸಮಿತಿ ಸಂಯೋಜಕರಾದ ಶಿಶುಪಾಲ ಪೂವಣಿ ಪರಮ ಪೂಜ್ಯ ಮುನಿಮಹಾರಾಜರ ದರ್ಶನಮಾಡಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವಂತೆ ಆಹ್ವಾನಿಸಿದರು.

ಸೋಮೇಶ್ವರದಲ್ಲಿ ಕಾರ್ಕಳ ಶ್ರೀಜೈನಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತೀ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಪಟ್ಟದ ಪುರೋಹಿತರೊಂದಿಗೆ ಆಗಮಿಸಿ ಮುನಿಶ್ರೀಗಳನ್ನು ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸಿದರು.

ಮುನಿ ಸಂಘದ ಜೊತೆಗೆ ಬೆಳ್ತಂಗಡಿ, ಕಾರ್ಕಳ, ಉಡುಪಿ ತಾಲೂಕಿನ ನೂರಾರು ಶ್ರಾವಕ ಶ್ರಾವಕಿಯರು ಭಾಗವಹಿಸಿ ಕೊಂಬು, ಕಹಳೆ, ವಾಲಗದೊಂದಿಗೆ ಮುನಿಗಳನ್ನು ಆಗುಂಬೆ ಘಾಟಿಯ ಕೊನೆಯ ತಿರುವಿನಿಂದ ಬರಮಾಡಿಕೊಂಡರು. ಉಳಿಯಬೀಡು ಶ್ರೀಧರ ಹೆಗ್ಡೆ, ಪಾಣೆಮಂಗಳೂರಿನ ಹರಿಶ್ಚಂದ್ರ ಶೆಟ್ಟಿ, ವರಂಗ ಶ್ರೀಜೈನಮಠದ ಮ್ಯಾನೇಜರ್ ಎ.ಯುವರಾಜ ಆರಿಗ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News