ದೇರಳಕಟ್ಟೆ: ನಿಟ್ಟೆ ವಿವಿ, ಮೆಡಾರ್ಗೊನಿಕ್ಸ್ ಸಂಸ್ಥೆಯ ನಡುವಿನ ಒಡಂಬಡಿಕೆ ಸಹಿ
ಕೊಣಾಜೆ, ಜ. 23: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿ ಔಷಧೀಯ ವಿಭಾಗಕ್ಕೆ ಸಂಬಂಧಿಸಿದಂತೆ ಮೆಡಿಟೆಕ್ ಇಂಡಿಯಾದ ಅಂಗ ಸಂಸ್ಥೆಯಾದ ಮೆಡಾರ್ಗೊನಿಕ್ಸ್ ಪ್ರೈ. ಲಿ. ಸಂಸ್ಥೆಯ ಜೊತೆಗೆ ಮಂಗಳವಾರ ಒಡಂಬಡಿಕೆ ಮಾಡಿಕೊಂಡಿದ್ದು ಉಭಯ ಸಂಸ್ಥೆಗಳ ಪ್ರಮುಖರು ಸಹಿ ಹಾಕಿದರು.
ಮಂಗಳೂರಿನ ಉದ್ಯಮಿ ಪ್ರಮೋದ್ ಹೆಗ್ಡೆ ಅವರು ಮೆಡಿಟೆಕ್ ಇಂಡಿಯಾದ ಅಂಗಸಂಸ್ಥೆಯಾಗಿ 2018ರಲ್ಲಿ ಮೆಡೋರ್ಗೊನಿಕ್ಸ್ ಪ್ರೈ.ಲಿ. ಸಂಸ್ಥೆ ಆರಂಭಿಸಿದ್ದು ಆಯುರ್ವೇದಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯು ಎಲ್ಲ ಔಷಧ ತಯಾರು ಮಾಡುತ್ತಿದೆ. ಬೈಕಂಪಾಡಿಯಲ್ಲಿ ಅತ್ಯಾಧುನಿಕ ಉತ್ಪಾದನೆ ಘಟಕ ಹೊಂದಿದೆ. ಒಪ್ಪಂದದ ಪ್ರಕಾರ ನಿಟ್ಟೆ ಫಾರ್ಮಸಿ ವಿಭಾಗದ ವಿದ್ಯಾರ್ಥಿಗಳಿಗೆ ಪೂರ್ವ ತರಬೇತಿ ಹಾಗೂ ಪೂರ್ವ ಕ್ಲಿನಿಕಲ್ ಅಧ್ಯಯನ ತರಬೇತಿ ಮತ್ತು ಔಷಧೀಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರ ನೀಡಲಿದ್ದು ನಿಟ್ಟೆ ಹಾಗೂ ಮೆಡೋರ್ಗನಿಕ್ಸ್ ಸಂಸ್ಥೆ ಸಂಯೋಜನೆಯೊಂದಿಗೆ ಸಂಶೋಧನೆಯನ್ನು ನಡೆಸಲಿದೆ.
ಮೆಡೋರ್ಗನಿಕ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಹೆಗ್ಡೆ ಹಾಗೂ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಒಪ್ಪಂದಕ್ಕೆ ಸಹಿ ಹಾಕಿದರು. ಮೆಡೋರ್ಗನಿಕ್ಸ್‍ನ ಗುಣಮಟ್ಟ ಪರಿಶೀಲನಾ ಮುಖ್ಯಸ್ಥ ಶ್ರೀಕುಮಾರ, ನಿಟ್ಟೆ ವಿವಿ ಸಹ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ, ನಿಟ್ಟೆ ವಿವಿ ಸಂಶೋಧನಾ ನಿರ್ದೇಶಕಿ ಪ್ರೊ. ಡಾ. ಇಂದ್ರಾಣಿ ಕರುಣಾ ಸಾಗರ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಪ್ರೊ.ಡಾ.ಪಿ.ಎಸ್. ಪ್ರಕಾಶ್ ಹಾಗೂ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಎಸ್. ಶಾಸ್ತ್ರಿ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.