ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಗರ್ಭಗುಡಿಗೆ ನಿಧಿ ಕುಂಭ ಸ್ಥಾಪನೆ
ಕಾಪು, ಜ. 23: ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ದಾರಗೊಳ್ಳಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನೂತನ ಗರ್ಭಗುಡಿಗೆ ಬುಧವಾರ ನಿಧಿ ಕುಂಭ ಸ್ಥಾಪನೆ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ದೇಶಕ್ಕೆ ಬರುವ ಅನಿಷ್ಟ, ಕರಾವಳಿಗೆ ಬರುವ ನಾನಾ ತರಹದ ತೊಂದರೆ ನಿವಾರಣೆಯ ಭವ್ಯ ದೇಗುಲ ನಿರ್ಮಾಣವಾಗಲಿ. 88 ವರ್ಷದ ನನಗೆ ಈ ದೇಗುಲ ಶೀಘ್ರ ನಿರ್ಮಾಣವಾಗಿ ನೋಡುವ ಭಾಗ್ಯ ಲಭಿಸಲಿ ಎಂದು ಮನೋಭಿಲಾಷೆ ವ್ಯಕ್ತಪಡಿಸಿದರು.
ಎಲ್ಲಾ ಭಕ್ತರ ಸಹಕಾರದಿಂದ ದೇವಾಲಯ, ನಾಗಾಲಯ, ಭೂತಾಲಯ ನಿರ್ಮಾಣದಲ್ಲಿ ಕರಾವಳಿ ಪ್ರದೇಶದ ಜನರು ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಭಕ್ತರೆಲ್ಲ ಸೇರಿ ಮಾಡುವ ಮಾರಿಕಾದೇವಿಯ ಮಂದಿರ ಇಡೀ ಗ್ರಾಮಕ್ಕೆ ಮಹಾಯಜ್ಞವಿದ್ದಂತೆ. ದುಷ್ಟ ನಾಶಕಳು, ಹುಲಿ ಹಲ್ಲಿನಿಂದ ಮರಿಗಳನ್ನು ಕೊಂಡೊಯ್ಯುವಂತೆ ಭಕ್ತರನ್ನು ರಕ್ಷಣೆ ಮಾಡುವ ಮಹಾಶಕ್ತಿರೂಪಿಣಿ ಮಾರಿಕಾದೇವಿಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದರು.
ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್. ಶೆಟ್ಟಿ ಮಾತನಾಡಿ, ಮಾರಿಗುಡಿ ದೇವಸ್ಥಾನದ ನಿರ್ಮಾಣಕ್ಕೆ ತಾಯಿಯ ಸ್ಮರಣಾರ್ಥ 9 9, 9 9, 99 9 ರೂಪಾಯಿಯ ದೇಣಿಗೆಯನ್ನು ಘೋಷಿಸಿದರು.
99 ಮಂದಿ ಏಕಕಾಲದಲ್ಲಿ ದ್ವೀಪ ಪ್ರಜ್ವಲನೆ ನಡೆಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಪು ಹೊಸ ಮಾರಿಗುಡಿಯ ಪ್ರಧಾನ ತಂತ್ರಿಗಳಾದ ವಿದ್ವಾನ್ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ, ಕುಮಾರಗುರು ತಂತ್ರಿ ಕೊರಂಗ್ರಪಾಡಿ, ಕಾಪು ಸೀಮೆಯ ತಂತ್ರಿ ವೇ.ಮೂ. ಶ್ರೀಶ ತಂತ್ರಿ ಕಲ್ಯ, ಮಾರಿಗುಡಿಯ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಅªರು ನಿಧಿ ಕುಂಭ ಸ್ಥಾಪನಾ ಪೂರ್ವಕ ಧಾರ್ಮಿಕ ವಿಧಾನಗಳನ್ನು ಪೂರೈಸಿದರು. ಇದೇ ಸಂದರ್ಭದಲ್ಲಿ ಉಚ್ಚಂಗಿ ಗುಡಿ ನಿರ್ಮಾಣಕ್ಕೆ ಪೇಜಾವರ ಸ್ವಾಮೀಜಿ ನವರತ್ನ ಸಮರ್ಪಿಸಿದರು.
ಜೀರ್ಣೋದ್ದಾರದ ಅರ್ಥಿಕ ಸಮಿತಿ, ಮುಂಬೈ ಹಾಗೂ ಬೆಂಗಳೂರು ಸಮಿತಿಗಳ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಗುರ್ಮೆ ಸುರೇಶ್ ಶೆಟ್ಟಿ, ರವಿ ಸುಂದರ ಶೆಟ್ಟಿ, ಎಂಆರ್‍ಜೆ ಗ್ರೂಫ್‍ನ ಪ್ರಕಾಶ್ ಶೆಟ್ಟಿಯವರಿಗೆ ಪ್ರಸಾದ ನೀಡಿ ಜವಾಬ್ದಾರಿ ವಹಿಸಲಾಯಿತು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ ಶುಭ ಹಾರೈಸಿದರು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ, ರಾಜ್ಯ ಧಾರ್ಮಿಕ ಪರಿಷತ್‍ನ ಆಗಮ ಪಂಡಿತ ಕೇಂಜ ಶ್ರೀಧರ ತಂತ್ರಿ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು. ಜೊತೆ ಕಾರ್ಯದರ್ಶಿ ನಿರ್ಮಲ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ವಂದಿಸಿದರು. ಉಪನ್ಯಾಸಕರಾದ ಶಿವಣ್ಣ ಬಾಯರ್ ಮತ್ತು ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.