ಶಿಕ್ಷಣವು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪಿಸುವಂತಿರಬೇಕು: ನ್ಯಾ. ಮಹಮ್ಮದ್ ನವಾಝ್
ಪುತ್ತೂರು, ಜ. 23: ಶಿಕ್ಷಣದ ಮೂಲ ಉದ್ದೇಶ ಕೇವಲ ಜ್ಞಾನ, ಕೌಶಲ್ಯಗಳ ಸಂಪಾದನೆ ಮಾತ್ರ ಆದರೆ ಸಾಲದು. ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ವಿಕಸನದೊಂದಿಗೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪಿಸುವಂತಿರಬೇಕು ಎಂದು ರಾಜ್ಯ ಹೈಕೋರ್ಟು ನ್ಯಾಯಾಧೀಶ ಮಹಮ್ಮದ್ ನವಾಝ್ ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಹಿರಿಯ ವಿದ್ಯಾರ್ಥಿ ಮತ್ತು ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಮಹತ್ವಪೂರ್ಣ ಸಾಧನೆಗೆ ಶಿಸ್ತು ಮತ್ತು ಸತತ ಪರಿಶ್ರಮ ಅತಿ ಮುಖ್ಯ. ಹಿರಿಯ ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆಗೈದ ಶಿಕ್ಷಣ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವಿಟ್ಟುಕೊಳ್ಳುವ ಜತೆಗೆ ಸಂಸ್ಥೆಯ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಮನೋಭಾವ ಹೊಂದಿರಬೆಕು ಎಂದು ತಿಳಿಸಿದರು.
ಮಂಗಳೂರಿನ ಎಮ್.ಜಗನ್ನಾಥ್ ಕಾಮತ್ ಅಂಡ್ ಕೊ ಸಂಸ್ಥೆಯ ಸಿಎ.ಎಮ್.ಜಗನ್ನಾಥ ಕಾಮತ್ ಅವರು ಮಾತನಾಡಿ, ಈ ಶಿಕ್ಷಣ ಸಂಸ್ಥೆಯು ಪ್ರತಿಭಾನ್ವಿತರನ್ನು ಸಮಾಜಕ್ಕೆ ನೀಡುವ ಮೂಲಕ ಬಹಳಷ್ಟು ಹೆಸರು ಗಳಿಸಿದೆ.ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಕೀರ್ತಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂದರು.
ವಿಜಯಾ ಬ್ಯಾಂಕ್ ಹುಬ್ಬಳ್ಳಿಯ ಪ್ರಾದೇಶಿಕ ಕಛೇರಿಯ ಉಪಮಹಾ ಪ್ರಬಂಧಕ ಬ್ಯಾಪ್ಟಿಸ್ಟ್ ಲೋಬೊ ಅವರು ಮಾತನಾಡಿ, ಈ ಕಾಲೇಜು ಹಲವಾರು ಕ್ರೀಡಾ ಸಾಧಕರನ್ನು ಸೃಷ್ಠಿ ಮಾಡಿರುವ ಅಪ್ರತಿಮ ಶಿಕ್ಷಣ ಸಂಸ್ಥೆಯಾಗಿದೆ ಎಂದರು.
ಮೈಸೂರಿನ ಕೈಗಾರಿಕೋದ್ಯಮಿ ಸುಬ್ರಹ್ಮಣ್ಯರೈ ಅವರು ಮಾತನಾಡಿ, ಪ್ರಸ್ತುತ ಸ್ವ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಜೀವನದಲ್ಲಿ ಶಿಸ್ತು, ಪರಿಶ್ರಮ ಸಮಯ ಪಾಲನೆ ಮತ್ತು ಭವಿಷ್ಯದ ಕುರಿತು ಸ್ಪಷ್ಟಯೋಜನೆಯನ್ನು ಅಳವಡಿಸಿಕೊಂಡಾಗ ಯಶಸ್ಸು ನಿಶ್ಚಿತ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಮಾಜಿ ವಿಕಾರ್‍ಜನರಲ್ ಮೊ. ಡೆನ್ನಿಸ್ ಮೊರಾಸ್ ಪ್ರಭು ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಯಶಸ್ಸಿನಲ್ಲಿ ರಕ್ಷಕ-ಶಿಕ್ಷಕ ಸಂಘ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಕೊಡುಗೆ ಮಹತ್ವಪೂರ್ಣವಾದುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಿಎಸ್‍ಟಿ ಪ್ರಶಸ್ತಿ ಪುರಸ್ಕೃತರಾದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ.ಆ್ಯಂಟನಿ ಪ್ರಕಾಶ್ ಮೊಂತೆರೊ,ಪಿಎಚ್‍ಡಿ ಪದವಿ ಗಳಿಸಿರುವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ ಚಂದ್ರಶೇಖರ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಾಲಿನಿ ಕೆ ಹಾಗೂ ಮಂಗಳೂರು ವಿವಿ ಸಿಂಡಿಕೇಟ್‍ಗೆ ನಾಮನಿರ್ದೇಶನಗೊಂಡಿರುವ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಅವರನ್ನುಸನ್ಮಾನಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕಾಲೇಜಿನ ಕ್ರೀಡಾ ಪ್ರತಿಭೆಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾಲೇಜಿನ ಸಂಚಾಲಕ ಆಲ್ಫ್ರೆಡ್‍ಜೆ ಪಿಂಟೊ ಶುಭಾಶಂಸನೆಗೈದರು. ಸಂತ ಫಿಲೋಮಿನಾ ಪದವಿ ಕಾಲೇಜ್‍ನ ಪ್ರಾಂಶುಪಾಲ ಫ್ರೊ. ಲಿಯೋ ನೊರೊನ್ಹಾ, ಪೂರ್ವಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ, ಪದವಿ ಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್‍ರೈ, ಕಾರ್ಯದರ್ಶಿ ಪ್ರಶಾಂತ್ ಭಟ್ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕೆ ಚಂದ್ರಶೇಖರ್‍ಹಾಗೂ ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಎಡ್ವಿನ್.ಎಸ್.ಡಿ'ಸೋಜ ವರದಿ ಮಂಡಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆ್ಯಂಟನಿ ಒಲಿವೆರ ವಂದಿಸಿದರು. ಹಿರಿಯ ವಿದ್ಯಾರ್ಥಿನಿ ಪ್ರತಿಮಾ ಹೆಗ್ಡೆ ನಿರೂಪಿಸಿದರು.