×
Ad

ಉಡುಪಿ: 12 ಮಂಗಗಳಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆ

Update: 2019-01-23 22:01 IST

ಉಡುಪಿ, ಜ. 23: ಉಡುಪಿ ಜಿಲ್ಲೆಯಲ್ಲಿ ವಿವಿದೆಡೆಗಳಲ್ಲಿ ಜ. 8ರ ನಂತರ ಇಂದಿನವರೆಗೆ ಒಟ್ಟು 64 ಸತ್ತ ಮಂಗಗಳ ಕಳೇಬರ ಪತ್ತೆಯಾಗಿದ್ದು, ಇವುಗಳಲ್ಲಿ 26 ಮಂಗಗಳ ಪೋಸ್ಟ್‌ಮಾರ್ಟಂ ಮಾಡಿ ಅವುಗಳ ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗದ ವಿಡಿಎಲ್ ಪ್ರಯೋಗಾಲಯ ಅಲ್ಲಿಂದ ಪುಣೆಯ ಎನ್‌ಐವಿಗೆ ಕಳುಹಿಸಲಾಗಿದೆ.

ಇವುಗಳಲ್ಲಿ 19ರ ವರದಿ ಬಂದಿದ್ದು, 12 ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಇರುವುದು ಪತ್ತೆಯಾಗಿದೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಹೊಸದಾಗಿ ಬೆಳ್ವೆಯ ಅಲ್ಬಾಡಿ ಹಾಗೂ ಕುಕ್ಕಂದೂರುಗಳಲ್ಲಿ ಸಿಕ್ಕ ಮಂಗಗಳಲ್ಲಿ ವೈರಸ್ ಪತ್ತೆಯಾಗಿದೆ. ಉಳಿದ ಏಳು ಮಂಗಗಳ ದೇಹದಲ್ಲಿ ವೈರಸ್ ಪತ್ತೆಯಾಗಿಲ್ಲ. ಇನ್ನು ಏಳು ಮಂಗಗಳ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದ ವಿಡಿಎಲ್‌ನೊಂದಿಗೆ ಮಣಿಪಾಲದಲ್ಲಿರುವ ಮಣಿಪಾಲ ಸೆಂಟರ್ ಫಾರ್ ವೈರಸ್ ರಿಸರ್ಚ್ (ಎಂಸಿವಿಆರ್)ಗೂ ವಿಸೇರಾ ವನ್ನು ಕಳುಹಿಸಲಾಗುತ್ತಿದೆ ಎಂದವರು ತಿಳಿಸಿದರು.

ಬುಧವಾರ 6 ಕಳೇಬರ ಪತ್ತೆ: ಬುಧವಾರ ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಒಟ್ಟು ಆರು ಸತ್ತ ಮಂಗಗಳ ಕಳೇಬರ ಸಿಕ್ಕಿದೆ. ಇವುಗಳಲ್ಲಿ ಎರಡು ಕುಂದಾಪುರ ತಾಲೂಕಿನಲ್ಲಿ-ಬೈಂದೂರು ಮತ್ತು ಬೆಳ್ವೆ-, ಮೂರು ಕಾರ್ಕಳ ತಾಲೂಕಿನಲ್ಲಿ- ಅಜೆಕಾರು, ಇರ್ವತ್ತೂರು, ಬೈಲೂರು- ಹಾಗೂ ಒಂದು ಉಡುಪಿ ತಾಲೂಕಿನಲ್ಲಿ-ಪೇತ್ರಿ- ಪತ್ತೆಯಾಗಿದೆ.

ಇವುಗಳಲ್ಲಿ ಅಜೆಕಾರು ಮತ್ತು ಬೈಂದೂರುಗಳಲ್ಲಿ ಪತ್ತೆಯಾದ ಮಂಗಗಳ ಅಟಾಪ್ಸಿ ನಡೆಸಿ ಪರೀಕ್ಷೆಗಾಗಿ ಶಿವಮೊಗ್ಗ ಮತ್ತು ಮಣಿಪಾಲಕ್ಕೆ ಕಳುಹಿಸಲಾಗಿದೆ. ಬೆಳ್ವೆಯಲ್ಲಿ ಈಗಾಗಲೇ ಬೇರೆ ಮಂಗಗಳಲ್ಲಿ ವೈರಸ್ ಪತ್ತೆಯಾಗಿರುವುದರಿಂದ ಇದರ ಅಟಾಪ್ಸಿ ನಡೆಸಲಾಗಿಲ್ಲ. ಉಳಿದ ಮೂರು ಮಂಗಗಳ ದೇಹಗಳು ಕೊಳೆತು ಹೋಗಿವೆ.

ಒಬ್ಬರ ರಕ್ತ ಪರೀಕ್ಷೆಗೆ: ಇಂದು ಕುಂದಾಪುರ ತಾಲೂಕು ಶಂಕರನಾರಾಯಣದ ಒಬ್ಬರು ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅವರ ರಕ್ತವನ್ನು ಪರೀಕ್ಷೆಗಾಗಿ ಮಣಿಪಾಲದ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಇದರ ವರದಿ ಇನ್ನೂ ಬಂದಿಲ್ಲ ಎಂದ ಡಾ.ಪ್ರಶಾಂತ್ ಭಟ್, ಜಿಲ್ಲೆಯಲ್ಲಿ ಈವರೆಗೆ ಒಟ್ಟು ಆರು ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, ಐವರ ರಕ್ತದಲ್ಲಿ ಮಂಗನ ಕಾಯಿಲೆ ಅಂಶ ಪತ್ತೆಯಾಗಿಲ್ಲ ಎಂದರು. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ಶಂಕಿತ ಪ್ರಕರಣ ಕಂಡುಬಂದಿಲ್ಲ ಎಂದರು.

ವಿಡಿಯೋ ಕಾನ್ಫರೆನ್ಸ್: ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗನ ಕಾಯಿಲೆ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಸರೆನ್ಸ್ ನಡೆಸಿ ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಸದ್ಯದ ಸ್ಥಿತಿ ಗತಿಯ ಕುರಿತು ಸಮಗ್ರ ಮಾಹಿತಿ ಪಡೆದಿದ್ದು, ಕೈಗೊಳ್ಳಬೇಕಾದ ಕ್ರಮದ ಕುರಿತು ಕೆಲವು ಸಲಹೆ-ಸೂಚನೆಗಳನ್ನೂ ಅಧಿಕಾರಿಗಳಿಗೆ ನೀಡಿದ್ದಾರೆಂದು ತಿಳಿದು ಬಂದಿದೆ.

ಡಿಎಂಪಿ ಪರಿಣಾಮದ ಸಮೀಕ್ಷೆ: ಮಂಗನಕಾಯಿಲೆ ಹರಡುವ ಉಣ್ಣಿ ಕಚ್ಚದಂತೆ ತಡೆಯಲು ಹೆಚ್ಚಾಗಿ ಕಾಡುಪ್ರದೇಶಗಳಿಗೆ ತೆರಳುವವರು ಕೈ-ಕಾಲು ಗಳಿಗೆ ಬಳಸುವ ಡಿಎಂಪಿ ತೈಲಕ್ಕೆ ಕುಂದಾಪುರ ತಾಲೂಕಿನಲ್ಲಿ ಒಳ್ಳೆಯ ಬೇಡಿಕೆ ಇದ್ದು, ಇದರ ಪರಿಣಾಮದ ಕುರಿತು ಖಚಿತವಾಗಿ ತಿಳಿಸುವಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿರು ವುದಾಗಿ ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಪತ್ರಿಕೆಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಂಗಗಳು ಸಾಯತೊಡಗಿದಾಗ ಹಾಗೂ ಮೊದಲ ಹಂತದಲ್ಲಿ ಎಂಟು ಮಂಗಗಳಲ್ಲಿ ವೈರಸ್ ಪತ್ತೆಯಾದಾಗ ಈಗಿರುವ ಡಿಎಂಪಿ ತೈಲವನ್ನು ಬಳಸಲು ಆರಂಭಿಸಲಾಗಿತ್ತು. ಇವುಗಳು ಪರಿಣಾಮಕಾರಿಯಾಗಿವೆಯೇ, ಕಂಪೆನಿ ನಕಲಿ ತೈಲಗಳನ್ನು ನೀಡುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದರು.

ಮನೆಮದ್ದಿದ್ದರೆ ತಿಳಿಸಿ: ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಎಎನ್‌ಎಫ್ ಸಿಬ್ಬಂದಿಗಳಿಗೆ ಈಗಾಗಲೇ ಡಿಎಂಪಿ ತೈಲ ಒದಗಿಸಲಾಗಿದೆ. ಅದೇ ರೀತಿ ಕಾಡಿಗೆ ತೆರಳುವ ಸಾರ್ವಜನಿಕರೂ ಇದನ್ನು ಬಳಸುತಿದ್ದಾರೆ. ಅವರಿಂದ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಡಾ.ಉಡುಪ ತಿಳಿಸಿದರು.

ಅಲ್ಲದೇ ಮಂಗನ ಕಾಯಿಲೆಗೆ ಯಾವುದಾದರೂ ಪರಿಣಾಮಕಾರಿಯಾದ ‘ಮನೆಮದ್ದು’ ಹಳ್ಳಿಗಳಲ್ಲಿ ಲಭ್ಯವಿದ್ದಲ್ಲಿ ಅವುಗಳ ಕುರಿತು ಮಾಹಿತಿ ನೀಡುವಂತೆ ಡಾ.ಉಡುಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News