ಡಿಸೇಲ್ ವದಂತಿ: ಗೋವಾದಲ್ಲಿ ಮಲ್ಪೆ ಬೋಟುಗಳಿಂದ ಪರಿಶೀಲನೆ

Update: 2019-01-23 16:36 GMT

ಉಡುಪಿ, ಜ.23: ಸುವರ್ಣ ತ್ರಿಭುಜ ಬೋಟು ಸೇರಿದಂತೆ ಏಳು ಮಂದಿ ಮೀನುಗಾರರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಗೋವಾ ರಾಜ್ಯದ ಬೇತುಲ್ ಎಂಬಲ್ಲಿ ಸಮುದ್ರದ ಮಧ್ಯೆ ಡಿಸೇಲ್ ಅಂಶ ಪತ್ತೆಯಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಮಲ್ಪೆಯ ಏಳೆಂಟು ಆಳ ಸಮುದ್ರ ಬೋಟುಗಳು ಬೇತುಲ್ ಪ್ರದೇಶಕ್ಕೆ ಇಂದು ಬೆಳಗ್ಗೆ ತೆರಳಿವೆ.

ಜ.22ರಂದು ಪೊಲೀಸ್ ತಂಡ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇದೀಗ ಮೀನುಗಾರರೇ ಪರಿಶೀಲನೆ ನಡೆಸಲು ತಮ್ಮ ಬೋಟುಗಳಲ್ಲಿ ಬೇತುಲ್ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿ ಮೀನುಗಾರರು ಸಮುದ್ರ ಮಧ್ಯೆ ಆ್ಯಂಕರ್ ಹಾಕಿ ಬೋಟು ಮುಳುಗಿರ ಬಹುದೆ ಎಂದು ಶೋಧಿಸುವ ಕೆಲಸ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮುದ್ರ ಮಧ್ಯೆ ಶೋಧ ಕಾರ್ಯ ನಡೆಸುತ್ತಿರುವ ನೌಕಪಡೆಯ ತಂಡಕ್ಕೆ ಆಳದಲ್ಲಿ ಬೋಟಿನ ತುಂಡಾದ ಭಾಗವೊಂದು ಸಿಕ್ಕಿದೆ ಎಂಬ ಸುದ್ದಿಯನ್ನು ಪೊಲೀಸ್ ಮೂಲಗಳು ನಿರಾಕರಿಸಿವೆ. ಅಂತಹ ಯಾವುದೇ ಕುರುಹುಗಳು ದೊರೆತಿಲ್ಲ ಎಂದು ಮೂಲಗಳು ಧೃಢಪಡಿಸಿವೆ.

ಡಿ.15ರಂದು ಕಾರವಾರದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ನೌಕಪಡೆಯ ಹಡಗಿನ ತಳಭಾಗಕ್ಕೆ ಮುಳುಗಡೆಯಾದ ಬೋಟೊಂದು ಢಿಕ್ಕಿ ಹೊಡೆದ ಹಾನಿ ಯಾಗಿರುವ ಹಿನ್ನೆಲೆಯಲ್ಲಿ ನೌಕಪಡೆಯ ಸೋನಾರ್ ತಂತ್ರಜ್ಞಾನದ ಮೂಲಕ ಸಮುದ್ರದ ಆಳದಲ್ಲಿ ಶೋಧ ಕಾರ್ಯವನ್ನು ಆರಂಭಿಸಲಾಗಿತ್ತು. ಈ ಬಗ್ಗೆ ಪತ್ರಿಕೆ ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಅವರನ್ನು ಸಂಪರ್ಕಿಸಿದಾಗ, ನೌಕಾಪಡೆಗೆ ಕೆಲವೊಂದು ಕುರುಹುಗಳು ಸಿಕ್ಕಿರುವ ವದಂತಿಗಳು ಹರಿದಾಡುತ್ತಿದ್ದು, ಈ ಕುರಿತು ನೈಜ ವಿಚಾರವನ್ನು ಜನರ ಮುಂದೆ ಹೇಳಬೇಕು ಎಂಬುದಾಗಿ ಈಗಾಗಲೇ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ. ಊಹಾಪೋಹಗಳನ್ನು ನಾವು ನಂಬುವುದಿಲ್ಲ. ನೌಕಾಪಡೆಯು ತನ್ನಲ್ಲಿರುವ ಎಲ್ಲ ತಂತ್ರಜ್ಞಾನವನ್ನು ಬಳಸಿಕೊಂಡು ನಾಪತ್ತೆಯಾದವರನ್ನು ಹುಡುಕಿ ತರುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News