ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮನೆ ಮೇಲೆ ಐಟಿ ದಾಳಿ
ಉಡುಪಿ, ಜ.23: ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ಗುತ್ತಿಗೆದಾರ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸೇರಿದಂತೆ ಕುಂದಾಪುರ ಹಾಗೂ ಕಾರ್ಕಳದ ಉದ್ಯಮಿಗಳ ಮನೆಗಳ ಮೇಲೆ ಇಂದು ಐಟಿ ದಾಳಿಯಾಗಿರುವ ಬಗ್ಗೆ ವರದಿಯಾಗಿದೆ.
ಬೆಳಗಿನ ಜಾವ ದಾಳಿ ನಡೆಸಿದ ಐಟಿ ಅಧಿಕಾರಿಗಳ ತಂಡ ಉದಯ ಕುಮಾರ್ ಶೆಟ್ಟಿ ಅವರ ಮಣಿಪಾಲದ ಸಾಯಿರಾಧ ಗ್ರೀನ್ ವ್ಯಾಲಿನಲ್ಲಿರುವ ಮನೆ, ಮುನಿಯಾಲುವಿನಲ್ಲಿರುವ ಮನೆ, ಗೇರುಬೀಜ ಫ್ಯಾಕ್ಟರಿ ಹಾಗೂ ಕಚೇರಿ ಗಳಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆನ್ನಲಾಗಿದೆ.
ಬೆಳಗ್ಗೆಯಿಂದ ರಾತ್ರಿಯವರೆಗೂ ಪರಿಶೀಲನೆ ಕಾರ್ಯ ಮುಂದುವರೆದಿದೆ. ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಣಿಪಾಲದ ಮನೆಯಲ್ಲಿದ್ದು, ಐಟಿ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದಾರೆಂದು ತಿಳಿದುಬಂದಿದೆ. ಐಟಿ ಅಧಿಕಾರಿ ಗಳು ಮಣಿಪಾಲದ ಮನೆಗೆ ಬಂದು ನಿಲ್ಲಿಸಿದ್ದರೆನ್ನಲಾದ ವಾಹನದ ಮುಂದಿನ ಗಾಜಿನಲ್ಲಿ ‘ಮಂಗನ ಕಾಯಿಲೆ ಬಗ್ಗೆ ಜನಜಾಗೃತಿ ಜಾಥ’ ಎಂಬ ಫಲಕ ಅಂಟಿಸಿರುವುದು ಕಂಡು ಬಂದಿದೆ. ಈ ಮೂಲಕ ಐಟಿ ಅಧಿಕಾರಿಗಳು ಬೇರೆ ಬೇರೆ ಸೋಗಿನಲ್ಲಿ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಮಾಹಿತಿ ನೀಡುವುದಾಗಿ ಉದಯಕುಮಾರ್ ಶೆಟ್ಟಿ ಆಪ್ತ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಮಾಧ್ಯಮದವರು ಸಂಜೆ ಮಣಿಪಾಲದ ಮನೆಗೆ ತೆರಳಿದರೂ, ಒಳಗೆ ಪ್ರವೇಶಿಸಲು ಸೆಕ್ಯುರಿಟಿ ಗಾರ್ಡ್ ಹಾಗೂ ಮುನಿಯಾಲು ಅವರನ್ನು ಸಂಪರ್ಕಿಸಲು ಐಟಿ ಅಧಿಕಾರಿಗಳು ಅವಕಾಶ ನಿರಾಕರಿಸಿದರು.
ಅದೇ ರೀತಿ ಕಾರ್ಕಳದ ಕ್ರಷರ್ ಮಾಲಿಕನ ಮನೆ ಹಾಗೂ ಕಚೇರಿಗಳಿಗೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆನ್ನಲಾಗಿದೆ. ಅಲ್ಲದೆ ಕುಂದಾಪುರ ಉದ್ಯಮಿಯೊಬ್ಬರ ಮನೆಯ ಮೇಲೂ ದಾಳಿಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಬೆಂಗಳೂರಿನ ಅಧಿಕಾರಿಗಳು ಏಕಕಾಲಕ್ಕೆ ಈ ದಾಳಿ ನಡೆಸಿದ್ದು, ತಡರಾತ್ರಿಯವರೆಗೂ ದಾಖಲೆ ಪರಿಶೀಲನೆ ಹಾಗೂ ಶೋಧ ಕಾರ್ಯವನ್ನು ಮುಂದುವೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.