ಕುಂದಾಪುರ: ಅಪರಿಚಿತರಿಂದ ನಗದು, ಮೊಬೈಲ್ ಕಳವು
Update: 2019-01-23 22:13 IST
ಕುಂದಾಪುರ, ಜ. 23: ಬ್ಯಾಂಕಿಗೆ ಹಾಕಲು ತಂದಿದ್ದ ಸಾವಿರಾರು ರೂ. ಹಣ ಹಾಗೂ ಮೊಬೈಲ್‌ನ್ನು ಅಪರಿಚಿತರಿಬ್ಬರು ಕಳವು ಮಾಡಿರುವ ಘಟನೆ ಕುಂದಾ ಪುರ ಪುರಸಭೆಯ ಎದುರಿನ ಎಸ್‌ಬಿಐ ಬ್ಯಾಂಕ್ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಜ.22ರಂದು ಬೆಳಗ್ಗೆ ನಡೆದಿದೆ.
ಜಾರ್ಖಂಡ್ ಮೂಲದ, ಪ್ರಸ್ತುತ ಮುಧೂರು ಜಡ್ಕಲ್ ನಿವಾಸಿ ಸಂತೋಷ ವರಾನ್(32) ಎಂಬವರು ಎಸ್‌ಬಿಐ ಬ್ಯಾಂಕಿಗೆ ಹಣ ಹಾಕಲು ಬಂದಿದ್ದು, ಬ್ಯಾಂಕ್ ರಜೆಯ ಕಾರಣ ಅಲ್ಲೇ ಸಮೀಪದ ಮೆಶಿನ್ ಮೂಲಕ ಹಣ ಹಾಕಲು ಹೋಗಿದ್ದರು. ಆದರೆ ಅಲ್ಲಿ ತುಂಬ ಜನ ಇದ್ದ ಹಿನ್ನೆಲೆಯಲ್ಲಿ ಅವರು ಪಾರ್ಕಿಂಗ್ ಸ್ಥಳದಲ್ಲಿ ಕುಳಿತುಕೊಂಡಿದ್ದರೆನ್ನಲಾಗಿದೆ.
ಆಗ ಅಲ್ಲಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂತೋಷ್ ಅವರ ಬಳಿ ಇದ್ದ 35000ರೂ. ನಗದು ಹೊಂದಿದ್ದ ಚೀಲ ಹಾಗೂ 5000 ರೂ. ಮೌಲ್ಯದ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.