×
Ad

ವಿವೇಚನೆ ಇರುವ ಯುವಶಕ್ತಿಯನ್ನು ತಯಾರು ಮಾಡದೇ ಇದ್ದರೆ ಉತ್ತಮ ದೇಶ ನಿರ್ಮಾಣ ಅಸಾಧ್ಯ: ಅಮೃತ್ ಶೆಣೈ

Update: 2019-01-23 22:51 IST

ಪುತ್ತೂರು, ಜ. 23: ರಾಜಕೀಯ ಲಾಭಕ್ಕಾಗಿ ಯುವಕರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲಾಗುತ್ತಿದ್ದು, ಇದರಿಂದಾಗಿ ಇತಿಹಾಸ ಅರಿಯದ ಮುಗ್ಧ ಯುವಕರು ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಬಿಜೆಪಿಗರು ರಾಜಕೀಯ ಲಾಭಕ್ಕಾಗಿ ಎಲ್ಲಾ ತಂತ್ರಗಾರಿಕೆ ಮಾಡುತ್ತಿದ್ದು, ಅವರು ಹೇಳುವ ಸುಳ್ಳನ್ನೇ ಸತ್ಯವೆಂದು ಮುಗ್ಧ ಯುವಕರು ನಂಬಿಕೊಂಡಿದ್ದಾರೆ. ಇದರಿಂದಾಗಿ ಇಂದು ದೇಶ, ಅದರಲ್ಲೂ ಕರಾವಳಿ ಅಪಾಯದಲ್ಲಿದೆ. ವಿವೇಚನೆ ಇರುವ ಯುವಶಕ್ತಿಯನ್ನು ತಯಾರು ಮಾಡದೇ ಇದ್ದರೆ ಉತ್ತಮ ದೇಶ ನಿರ್ಮಾಣ ಅಸಾಧ್ಯ ಎಂದು ಎಐಸಿಸಿ ಸದಸ್ಯ ಅಮೃತ್ ಶೆಣೈ ಅವರು ಹೇಳಿದರು.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್‍ ಗಾಂಧಿ ಪಂಚಾಯಿತಿ ರಾಜ್ ಸಂಘಟನೆ ಆಶ್ರಯದಲ್ಲಿ ಬುಧವಾರ ನಡೆದ `ಯುವಶಕ್ತಿ ಮತ್ತು ಭಾರತ' ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವಿಂದು ಆಸ್ಪತ್ರೆ, ಹೆದ್ದಾರಿ, ವಿಶ್ವವಿದ್ಯಾಲಯ ಇತ್ಯಾದಿ ಆಧುನಿಕ ಸವಲತ್ತುಗಳನ್ನು ನಿರ್ಮಾಣ ಮಾಡುತ್ತಾ ಸಾಗುತ್ತಿದ್ದೇವೆ. ಆದರೆ ಧರ್ಮ ನಿರಾಕ್ಷೇಪ ವ್ಯಕ್ತಿಗಳನ್ನು ನಿರ್ಮಾಣ ಮಾಡದೇ ಹೋದರೆ, ಇವೆಲ್ಲ ಇದ್ದು ಏನು ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಮೂಲಭೂತವಾದಿ ಸಂಘಟನೆಯಾದ ಭಜರಂಗದಳ ಉನ್ಮಾದ ಸೃಷ್ಟಿಸುತ್ತಿದ್ದು, ಯುವಕರು ಇದರ ಜತೆ ಸೇರಿಕೊಂಡಿದ್ದಾರೆ. ಧರ್ಮಕ್ಕಾಗಿ ಇವರು ಜೀವ ಕೊಡುತ್ತಿದ್ದಾರಂತೆ. ಧರ್ಮವನ್ನು ಪಾಲನೆ ಮಾಡದೆಯೇ ರಕ್ಷಣೆ ಮಾಡುವ ಮಾತು ಆಡುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಧರ್ಮವನ್ನು ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನು ಅರಿಯದಾಗಿದ್ದಾರೆ ಎಂದರು.

ಒಂದು ವೇಳೆ ನಾವು ಧೈರ್ಯದಿಂದ ಉತ್ತರ ನೀಡಬಲ್ಲೆವೆಂದಾದರೆ, ಜೀವನ ಸುಂದರ ಆಗಿರುತ್ತದೆ. ರಾಮ ಮೆಚ್ಚುವ ಕೆಲಸ ಮಾಡಿದಾಗ, ಜೈಶ್ರೀರಾಂ ಎಂದು ಹೇಳುತ್ತಾ ತಿರುಗಬೇಕಿಲ್ಲ. ಧರ್ಮದ ಚೌಕಟ್ಟಿನಲ್ಲಿ ಬಾಳಬೇಕು. ಯುವಕರ ತಲೆಯಲ್ಲಿ ಸದ್ವಿಚಾರ ತುಂಬಿದರೆ, ಸರಿ ತಪ್ಪುಗಳ ವಿವೇಚನೆ ತಿಳಿ ಹೇಳಿದರೆ ಮಾತ್ರ ಉತ್ತಮ ಸಮಾಜ, ದೇಶ ನಿರ್ಮಾಣ ಸಾಧ್ಯ ಎಂದರು.

ಜಾತಿ ಮತ್ತು ಧರ್ಮಕ್ಕಿಂತ ಅತೀತವಾದ ನಂಬಿಕೆಯೇ ಜಾತ್ಯಾತೀತತೆ. ಪ್ರತಿಯೊಬ್ಬರನ್ನೂ ಪ್ರೀತಿಸಬೇಕು. ಇನ್ನೊಬ್ಬರ ಜಾತಿ - ಧರ್ಮವನ್ನು ದ್ವೇಷಿಸು ವುದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಹಿಂದೂಗಳ ಉದ್ಧಾರಕರು ಎನ್ನುವ ಬಿಜೆಪಿಗರು ಜಾತ್ಯಾತೀತತೆಯನ್ನು ಪಾಲಿಸುತ್ತಿಲ್ಲ. ಹಿಂದೂಗಳ ಉದ್ಧಾರಕರು ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿಗರು ಹೇಳುವ ಜಾತ್ಯಾತೀತತೆ ಸಂಕುಚಿತ ಮನೋಭಾವದಿಂದ ಕೂಡಿದೆ ಎಂದ ಅವರು ಹಿಂದೂಗಳ ಉದ್ಧಾರಕ್ಕಾಗಿ ಅವರು ಜಾರಿ ಮಾಡಿದ ಒಂದಾದರೂ ಕಾನೂನನ್ನು ತಿಳಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಎಂದರೆ ಹಿಂದೂ ವಿರೋಧಿ ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಜಾತ್ಯಾತೀತತೆಯಡಿ ಬದುಕುತ್ತಿದೆ. ಟಿಪ್ಪು ಜಯಂತಿ ಜತೆಗೆ ರಾಮ ಜಯಂತಿಯನ್ನು ಮಾಡಿದೆ. ಜನರಿಗೆ ನಾವು ಇದನ್ನು ಅರ್ಥ ಮಾಡಿಕೊಡಬೇಕು ಎಂದ ಅವರು, ಬಿಜೆಪಿ ಎಂದರೆ ಅಪಾಯಕಾರಿ. ರಾಜಕೀಯ ಲಾಭಕ್ಕಾಗಿ ಎಲ್ಲ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತಾರೆ. ಇವರ ತಂತ್ರಗಾರಿಕೆಗೆ ಯುವಕರು ಬಲಿಯಾಗದಂತೆ ತಡೆಯಬೇಕಾಗಿದೆ. ನಮ್ಮ ದೇಶಕ್ಕೆ ಅಧಿಕೃತ ಧರ್ಮ ಇಲ್ಲ. ಸರ್ಕಾರಕ್ಕೆ ಅಧಿಕೃತ ಧರ್ಮ ಇಲ್ಲ. ಸಂವಿಧಾನ ನೀಡಿದ ಮುನ್ನುಡಿಯೇ ನಮ್ಮ ಧರ್ಮ. ದೇಶದ ಸಂಸತ್ತು ನಮ್ಮ ದೇವಸ್ಥಾನ. ಹಿಂದೂ ರಾಷ್ಟ್ರ ಕಟ್ಟುತ್ತೇವೆ ಎಂದು ಹೇಳುವವರು ಸಂಸತ್ತಿನಲ್ಲಿ ಮಸೂದೆ ಪಾಸ್ ಮಾಡಲಿ. ಯುವಕರ ಕೈಗೆ ತಲವಾರು ಕೊಡುವುದು ಬೇಡ ಎಂದು ಅವರು ಹೇಳಿದರು. 

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ರೈ, ಬ್ಲಾಕ್ ಉಸ್ತುವಾರಿ ಸುಭೋದ್ ಆಳ್ವ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ರಾಜೀವ್‍ಗಾಂಧಿ ಪಂಚಾಯಿತಿ ರಾಜ್ ಸಂಘಟನೆಯ ಸಂಚಾಲಕ ಸಂತೋಷ್ ಕುಮಾರ್ ಭಂಡಾರಿ, ಸೇವಾದಳದ ಸಂಘಟಕ ಜೋಕಿಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಗೋನ್ಸಾಲ್ವಿಸ್ ವಂದಿಸಿದರು.  ಪೂರ್ಣೇಶ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News