ನೀರುಡೆ ಬಳ್ಳಾಲಬೈಲು: ನೀರಿನ ಡ್ರಂನೊಳಗೆ ಮಂಗನ ಶವ ಪತ್ತೆ

Update: 2019-01-23 17:34 GMT

ಮೂಡುಬಿದಿರೆ, ಜ. 23: ಕೋತಿಮರಿಯೊಂದು ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಡೆ ಬಳ್ಳಾಲಬೈಲು ಪರಿಸರದಲ್ಲಿ  ನೀರಿನ ಡ್ರಂನೊಳಗೆ ಬಿದ್ದು ಸತ್ತಿದೆ.

ಒಂಟಿಯಾಗಿ ಜೀವಿಸುತ್ತಿದ್ದ ಬಳ್ಳಾಲಬೈಲ್‍ನ ಕೃಷ್ಣಪ್ಪ ಶೆಟ್ಟಿಗಾರ್ ಸುಮಾರು 10 ದಿನಗಳ ಹಿಂದೆ ನಿಧನ ಹೊಂದಿದ್ದರು. ಅವರ ನಿಧನ ಬಳಿಕ ಯಾರೂ ಮನೆಯಲ್ಲಿ ವಾಸವಿರದ ಕಾರಣ, ನೀರು ತುಂಬಿದ ಡ್ರಂನೊಳಗೆ ಕೋತಿ ಮರಿಯೊಂದು ಬಿದ್ದು ಸತ್ತದ್ದು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಆದರೆ ಶವ ಕೊಳೆತು ದುರ್ವಾಸನೆ ಹಬ್ಬತೊಡಗಿದ ಪರಿಣಾಮವಾಗಿ ಊರಿನವರು ಹುಡುಕಾಡುವಾಗ ಈ ಕೋತಿ ಮರಿಯ ಶವ ಬುಧವಾರ ಪತ್ತೆಯಾಗಿದೆ.

ಕಲ್ಲಮುಂಡ್ಕೂರು ಗ್ರಾ.ಪಂ. ಪಿಡಿಒ ಉಗ್ಗಪ್ಪ ಮೂಲ್ಯ ಅವರು  ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ನಸೀಬಾ, ಪಶುವೈದ್ಯಕೀಯ ವೈದ್ಯ ಡಾ.ಮಹೇಶ್ , ಆರೋಗ್ಯಕೇಂದ್ರದ  ಕಿರಿಯ ಆರೋಗ್ಯ ಸಹಾಯಕ ಮೊಹಮ್ಮದ್ ತನ್ವೀರ್ ಹಾಮದ್ ಜತೆಗೆ ಸ್ಥಳಕ್ಕೆ  ಆಗಮಿಸಿದರು. ಅರಣ್ಯ ಇಲಾಖಾ ಅಧಿಕಾರಿ ಕೆ.ಸಿ. ಮ್ಯಾಥ್ಯೂ, ತಾಲೂಕು ಆರೋಗ್ಯಅಧಿಕಾರಿ ನವೀನ್ ಕುಲಾಲ್ , ಕಲ್ಲಮುಂಡ್ಕೂರು ಗ್ರಾ. ಪಂ. ವಾರ್ಡ್ ಸದಸ್ಯ ಲಾಝರಸ್ ಡಿಕೋಸ್ತ ಅವರ ಉಪಸ್ಥಿತಿಯಲ್ಲಿ ಶವ ಮಹಜರು ನಡೆಯಿತು.

ಮಂಗನ ಖಾಯಿಲೆ ದೃಢಪಟ್ಟಿಲ್ಲ:

ಈ ಭಾಗದಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡ ಲಕ್ಷಣಗಳಿಲ್ಲ ಎಂದು ಆರೋಗ್ಯ ಇಲಾಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶವದ ಸನಿಹ ಮಂಗನ ಖಾಯಿಲೆಯಲ್ಲಿ ಕಾಣಿಸುವ ಹೇನಿನಂಥ ಜೀವಿಗಳು ಕಂಡುಬಂದಿಲ್ಲದ ಕಾರಣ ಇದೊಂದು ಆಕಸ್ಮಿಕ ಸಾವು ಎಂದು ತಾಲೂಕು ಆರೋಗ್ಯಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News