ಕೋಮುವಾದ ಸಂವಿಧಾನಕ್ಕೆ ಸವಾಲು: ನ್ಯಾ.ನಾಗಮೋಹನ್ ದಾಸ್

Update: 2019-01-23 17:40 GMT

ಮಂಗಳೂರು, ಜ.23: ಭಾರತ ದೇಶವನ್ನು ಅರ್ಥಮಾಡಿಕೊಳ್ಳದೆ ಭಾರತದ ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತ ಸಾಂಸ್ಕೃತಿಕವಾಗಿ ಬಹುರೂಪತೆ ಹೊಂದಿದ್ದು, ಕೋಮುವಾದ, ಮೂಲಭೂತವಾದ ಭ್ರಷ್ಟಾಚಾರ ಸಂವಿಧಾನಕ್ಕೆ ಸವಾಲೊಡ್ಡುತ್ತಿವೆ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಸಂವಿಧಾನ ದಿನಾಚರಣೆ’ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಗುರುವಾರ ನಡೆದ ಭಾರತ ಸಂವಿಧಾನದ ಕುರಿತ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದ ಗಣತಂತ್ರದ ಸಾಧನೆಗಳು ಹಾಗೂ ಮುಂದಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.

ಭಾರತೀಯರು ನಮ್ಮ ಬಹುತ್ವವನ್ನು ಉಳಿಸಿಕೊಳ್ಳಬೇಕಾದರೆ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮ ಸಂವಿಧಾನ ಕವಿತೆ, ಕಥೆಯಲ್ಲ. ಅದೊಂದು ಈ ದೇಶದ ಕಾರ್ಯಕ್ರಮವಾಗಿದೆ. ಎಲ್ಲ ಸ್ವತಂತ್ರ ದೇಶಗಳು ಗಣರಾಜ್ಯಗಳಲ್ಲ, ಆದರೆ ಎಲ್ಲ ಗಣರಾಜ್ಯಗಳು ಸ್ವತಂತ್ರ ರಾಷ್ಟ್ರಗಳಾಗಿವೆ ಎಂದು ತಿಳಿಸಿದರು.

ಸಂವಿಧಾನದಿಂದ ಸಾಕಷ್ಟು ಬದಲಾವಣೆ: ಭಾರತೀಯರು ಉತ್ತಮ ಮತ್ತು ಪ್ರಸ್ತುತವಾದ ಸಂವಿಧಾನವನ್ನು ಹೊಂದಿರುವುದರಿಂದ ಈ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಗುಪ್ತರ ಭಾರತ, ಮೌರ್ಯ ಭಾರತ, ಮೊಘಲ್ ಭಾರತ, ಬ್ರಿಟಿಷ್ ಭಾರತ ಎಂದು ಹೇಳುತ್ತಿದ್ದ ನಾವು ಈಗ ಪ್ರಜಾಸತ್ತಾತ್ಮಕ ಭಾರತ ಎಂದು ಹೆಮ್ಮೆಯಿಂದ ಹೇಳುವಂತಾಗಿದೆ ಎಂದು ವಿವರಿಸಿದರು.

ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶವಿರುವುದು ಸಂವಿಧಾನದ ಕೊಡುಗೆಯಾಗಿದೆ. ಬಡ ಕೃಷಿಕ ಹಿನ್ನೆಲೆಯಿಂದ ಬಂದಂತಹ ವ್ಯಕ್ತಿಯೊಬ್ಬ ನ್ಯಾಯಮೂರ್ತಿಯಾಗಲು ಅವಕಾಶವಿದೆ. ಬಡ ಮಧ್ಯಮ ವರ್ಗದ ವ್ಯಕ್ತಿಯೊಬ್ಬ ಪ್ರಧಾನಮಂತ್ರಿಯಾಗಬಹುದು ಮತ್ತು ರಾಷ್ಟ್ರಪತಿಯೂ ಆಗಲು ಸಾಧ್ಯವಿದೆ. ಈ ರಾಷ್ಟ್ರ ಆಧುನಿಕ ಗಣತಂತ್ರ ರಾಷ್ಟ್ರವಾದ್ದರಿಂದ ಜಾತಿ ವ್ಯವಸ್ಥೆ ಸಡಿಲಗೊಳ್ಳುವಂತಾಗಿದೆ. ಇವೆಲ್ಲವೂ ಗಣತಂತ್ರ ರಾಷ್ಟ್ರವಾಗಿ ಭಾರತದ ಸಾಧನೆ ಯಾಗಿದೆ ಎಂದು ತಮ್ಮ ಉಮನ್ಯಾಸದಲ್ಲಿ ಉಲ್ಲೇಖಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್, ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕಾದರೆ ಸಂವಿಧಾನವನ್ನು ಮತ್ತೆ ಮತ್ತೆ ಓದಬೇಕಾಗಿದೆ. ಆ ಮೂಲಕ ಸ್ವತಂತ್ರ ಗಣರಾಜ್ಯವಾದ ಭಾರತದ ವಿಚಾರಧಾರೆಯನ್ನು ಮತ್ತು ಸಂವಿಧಾನದ ಅರ್ಥ ಆಶಯಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದರು.

ಕಾರ್ಯಕ್ರಮದ ಸಂಚಾಲಕ ಡಾ.ವಿಶಾಂಝ್ ಪಿಂಟೊ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಕಾಲೇಜಿನ ರಿಜಿಸ್ಟ್ರಾರ್ ಪ್ರೊ.ಎ.ಎಂ. ನರಹರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News