×
Ad

‘ಮಣಿಪಾಲ ಮ್ಯಾರಥಾನ್‌ಗೆ 10,000 ಸ್ಪರ್ಧಿಗಳ ನಿರೀಕ್ಷೆ’

Update: 2019-01-24 19:50 IST

ಮಣಿಪಾಲ, ಜ.24: ಫೆ.17ರಂದು ನಡೆಯುವ 2019ನೇ ಸಾಲಿನ ಮಣಿಪಾಲ ಮ್ಯಾರಥಾನ್‌ನಲ್ಲಿ ದೇಶದಾದ್ಯಂತದಿಂದ ಆಗಮಿಸುವ ಸುಮಾರು 10,000 ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲ ವಿವಿ ಬಿಲ್ಡಿಂಗ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಒಟ್ಟು ಎಂಟು ಲಕ್ಷ ರೂ.ಮೊತ್ತದ ನಗದು ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.

ಐಸಿಐಸಿಐ ಪ್ರಧಾನ ಪ್ರಾಯೋಜಕರಾಗಿರುವ ಈ ಬಾರಿಯ ಮಣಿಪಾಲ ಮ್ಯಾರಥಾನ್‌ಗೆ ಫೆ.17ರಂದು ಮುಂಜಾನೆ ಮಣಿಪಾಲ ವಿವಿಯ ಪುಡ್‌ಕೋರ್ಟ್ ಎದುರು ಚಾಲನೆ ದೊರೆಯಲಿದೆ. ಕೆಎಂಸಿ ಗ್ರೀನ್ಸ್‌ನಲ್ಲಿ ಸ್ಪರ್ಧೆ ಮುಕ್ತಾಯಗೊಳ್ಳಲಿದೆ ಎಂದರು.

ಈ ಬಾರಿ ಹಾಫ್ ಮೆರಥಾನ್ (21.1ಕಿ.ಮೀ.), 10ಕಿ.ಮೀ., 5ಕಿ.ಮೀ. ಹಾಗೂ 3ಕಿ.ಮೀ. ಹೀಗೆ ನಾಲ್ಕು ವಿಭಾಗಗಳಿರುತ್ತವೆ. ಅಲ್ಲದೇ ಉಡುಪಿ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಸಮಯದ ನಿರ್ಬಂಧವಿಲ್ಲದ 5ಕಿ.ಮೀ.. ಹಾಗೂ 3ಕಿ.ಮೀ. ಓಟದ ಸ್ಪರ್ಧೆ ಇರುತ್ತದೆ. ಎಲ್ಲಾ ವಿಭಾಗಗಳ ವಿಜೇತರಿಗೂ ಪ್ರತ್ಯೇಕ ನಗದು ಬಹುಮಾನ ನೀಡಲಾಗುತ್ತದೆ 21.1ಕಿ.ಮೀ.. ಮತ್ತು 10ಕಿ.ಮೀ. ವಿಭಾಗಗಳಲ್ಲಿ ಮುಕ್ತ, 35ರಿಂದ 55 ವರ್ಷ, 56ಕ್ಕಿಂತ ಮೇಲೆ ಹಾಗೂ ಮಾಹೆಯ ವಿದ್ಯಾರ್ಥಿಗಳು ಮತ್ತು ಸ್ಟಾಫ್‌ಗಳಿಗೆ ಪ್ರತ್ಯೇಕ ಉಪವಿಭಾಗಗಳಿರುತ್ತವೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ರಘುಪತಿ ಭಟ್ ಮಾತನಾಡಿ, ಹಿಂದಿನ 13 ವರ್ಷಗಳಂತೆ ಈ ಬಾರಿಯೂ ದೇಶದಾದ್ಯಂತದ ಹಾಗೂ ವಿದೇಶಗಳ ಕೆಲ ಖ್ಯಾತನಾಮ ಮ್ಯಾರಥಾನ್ ಓಟಗಾರರು ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮಣಿಪಾಲ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಫೆ.15ರೊಳಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು. ಆಸಕ್ತರು ಆನ್‌ಲೈನ್‌ನಲ್ಲಿ - www.manipalmarathon.com- ಹೆಸರು ನೊಂದಾಯಿಸಿ ಕೊಳ್ಳಲು ಅವಕಾಶವಿದೆ ಎಂದರು.

ಈ ಬಾರಿ ಮ್ಯಾರಥಾನ್‌ನ ಘೋಷಾವಾಕ್ಯ ‘ಮಾನಸಿಕ ಆರೋಗ್ಯ ಕುರಿತು ಜಾಗೃತಿ’. ಮಾನಸಿಕ ಅಸ್ವಾಸ್ಥ ಎಲ್ಲಾ ವಯೋಮಾನದ ಜನರನ್ನು ಈಗ ತೀವ್ರವಾಗಿ ಬಾಧಿಸುತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇದಕ್ಕೆ ಒತ್ತು ನೀಡಲಾಗಿದೆ ಎಂದರು.

ಈ ಬಾರಿಯ ಮ್ಯಾರಥಾನ್ ಸಂದರ್ಭದಲ್ಲಿ ನಿಮಾನ್ಹ್‌ನ ನಿರ್ದೇಶಕ ಡಾ.ಬಿ. ಎನ್.ಗಂಗಾಧರ್, ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟಾಮಿ ಮುಖ್ಯ ಅತಿಥಿಗಳಾಗಿ ಉಸ್ಥಿತರಿರುವರು ಎಂದರು. ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪಿಎಲ್ ಎನ್‌ಜಿ ರಾವ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಐಸಿಐಸಿಐ ಬ್ಯಾಂಕಿನ ದಕ್ಷಿಣದ ಮುಖ್ಯಸ ಸುರೇಂದ್ರ ಅಪ್ಪಿಕಾಟ್ಲ, ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ಬಿ.ಆರ್.ಹಿರೇಮಠ, ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ ನಾಯಕ್, ಜಂಟಿ ಕಾರ್ಯದರ್ಶಿ ಡಾ.ಶೋಭಾ, ಭಾರತದ ಮಾಜಿ ಕ್ರಿಕೆಟ್ ಆಲ್‌ರೌಂಡರ್ ರಾಬಿನ್‌ಸಿಂಗ್, ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಶೋಕ ಅಡ್ಯಂತಾಯ, ಪೊಲೀಸ್ ಡಿವೈಎಸ್ಪಿ ಜೈಶಂಕರ್, ಮಣಿಪಾಲಠಾಣೆಯ ಎಸ್‌ಐ ಸುದರ್ಶನ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News