ವಂಶವಾಹಿ ತಿದ್ದಲ್ಪಟ್ಟ 5 ಮಂಗಗಳ ಸೃಷ್ಟಿಸಿದ ವಿಜ್ಞಾನಿಗಳು: ವರದಿ

Update: 2019-01-24 14:29 GMT

ಬೀಜಿಂಗ್, ಜ. 24: ವಂಶವಾಹಿ (ಜೀನ್)ಗಳಲ್ಲಿ ತಿದ್ದುಪಡಿ ಮಾಡಲ್ಪಟ್ಟ ಐದು ಮಂಗಗಳನ್ನು ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದಾರೆ. ಅವುಗಳ ವಂಶವಾಹಿಗಳಿಗೆ ಅಲ್ಝೀಮರ್ಸ್ ಕಾಯಿಲೆ ಮುಂತಾದ ಮಾನವರ ಹಲವಾರು ಕಾಯಿಲೆಗಳನ್ನು ವಿಜ್ಞಾನಿಗಳು ಸೇರಿಸಿದ್ದಾರೆ.

ವೈದ್ಯಕೀಯ ಸಂಶೋಧನೆಗಳಿಗಾಗಿ ಈ ರೀತಿಯ ವಂಶವಾಹಿ ಪರಿವರ್ತನೆ ಮಾಡಲಾಗಿದೆ ಎಂಬುದಾಗಿ ವಿಜ್ಞಾನಿಗಳು ಹೇಳಿಕೊಂಡಿರುವಂತೆಯೇ, ವಂಶವಾಹಿ ತಿದ್ದುವಿಕೆಗೆ ಸಂಬಂಧಿಸಿ ಹೊಸ ನೈತಿಕ ಕಳವಳಗಳನ್ನು ಇದು ಹುಟ್ಟುಹಾಕಿದೆ.

ವಂಶವಾಹಿ ತಿದ್ದಲ್ಪಟ್ಟ ಜಗತ್ತಿನ ಮೊದಲ ಶಿಶುಗಳು ಚೀನಾದಲ್ಲಿ ಹುಟ್ಟಿವೆ ಎಂಬ ಇತ್ತೀಚಿನ ವರದಿಗಳ ಬಳಿಕ, ಈ ಬೆಳವಣಿಗೆ ಸಂಭವಿಸಿದೆ. ವಂಶವಾಹಿ ತಿದ್ದಲ್ಪಟ್ಟ ಶಿಶುಗಳು ವೈಜ್ಞಾನಿಕ ಸಮುದಾಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿರುವುದನ್ನು ಸ್ಮರಿಸಬಹುದಾಗಿದೆ.

ನಿದ್ರೆ ಸಮಸ್ಯೆಗಳು, ಖಿನ್ನತೆ ಮತ್ತು ಅಲ್ಝೀಮರ್ಸ್ ಕಾಯಿಲೆಗಳಿಗೆ ಸಂಬಂಧಿಸಿದ ‘ಸರ್ಕೇಡಿಯನ್ ರಿದಮ್’ ಸಮಸ್ಯೆಗಳಿಂದ ಬಳಲುತ್ತಿದ್ದ ವಂಶವಾಹಿ ತಿದ್ದಲ್ಪಟ್ಟ ಮಂಗವೊಂದರಿಂದ ಐದು ಮಂಗಗಳನ್ನು ಚೀನಾದ ವಿಜ್ಞಾನಿಗಳು ತದ್ರೂಪಿ ವಿಧಾನದ ಮೂಲಕ ಸೃಷ್ಟಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

ಈ ಮೂಲಕ, ಸಮಾನ ವಂಶವಾಹಿಗಳುಳ್ಳ ಮಂಗಗಳ ಮಾದರಿಗಳು ಜೀವ ವೈದ್ಯಕೀಯ ಸಂಶೋಧನೆಗೆ ಲಭಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News