ಕೃಷ್ಣಾಪುರ: ಯುನಿವೆಫ್ ವತಿಯಿಂದ ಸೀರತ್ ಸಮಾವೇಶ
ಮಂಗಳೂರು, ಜ. 24: ಯುನಿವೆಫ್ ಕರ್ನಾಟಕ ಫೆ. 1 ರ ವರೆಗೆ "ಮಾನವ ಸಮಾಜ ಮತ್ತು ಆಧ್ಯಾತ್ಮಿಕತೆ ಪ್ರವಾದಿ ಮುಹಮ್ಮದ್ (ಸ) ರ ದೃಷ್ಟಿಯಲ್ಲಿ" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ನಡೆಯಿತು.
"ವರ್ತಮಾನದ ಮುಸ್ಲಿಮ್ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ ( ಸ)" ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದ ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ "ಮುಸ್ಲಿಮರ ಮೇಲೆ ನಿರಂತರ ಆರೋಪಗಳನ್ನು ಹೊರಿಸಲಾಗುತ್ತಿದೆ. ಒಂದು ಸಮಸ್ಯೆಯನ್ನು ಪರಿಹಾರಗೊಳಿಸಿದಾಗ ಇನ್ನೊಂದು ಪ್ರಹಾರ ಸಿದ್ಧಗೊಳ್ಳುತ್ತದೆ. ದೂರದೃಷ್ಟಿಯ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಈ ಸಮುದಾಯವು ತಾನೆದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಒಂದು ಪ್ರದೇಶದಲ್ಲಿ 10 ಯುವಕರನ್ನಾದರೂ ತಯಾರುಗೊಳಿಸಬೇಕಾಗಿದೆ" ಎಂದು ಹೇಳಿದರು.
ಸಂಚಾಲಕ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೌಫಲ್ ಹಸನ್ ಕಿರ್ ಅತ್ ಪಠಿಸಿದರು. ಅಬ್ದುರ್ರಹ್ಮಾನ್ ಪಿ.ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಯು.ಕೆ. ಖಾಲಿದ್ ಉಪಸ್ಥಿತರಿದ್ದರು.