×
Ad

ಮಕ್ಕಳು, ಮಹಿಳೆಯರ ಘನತೆಗೆ ಕುಂದುಂಟಾಗದಂತೆ ನೋಡಿಕೊಳ್ಳಿ: ಮಾಧ್ಯಮಗಳಿಗೆ ಎಸ್ಪಿ ಕಿವಿಮಾತು

Update: 2019-01-24 20:19 IST

ಉಡುಪಿ, ಜ.24: ಮಕ್ಕಳು ಮತ್ತು ಮಹಿಳೆಯರ ಕುರಿತಂತೆ ದೌರ್ಜನ್ಯವೂ ಸೇರಿದಂತೆ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಬರೆಯುವಾಗ ಅವರ ಘನತೆಗೆ ಚ್ಯುತಿಯಾದಂತೆ ನೋಡಿಕೊಳ್ಳಬೇಕು ಹಾಗೂ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ತಪ್ಪಿದರೆ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ. ನಿಂಬರಗಿ ಹೇಳಿದ್ದಾರೆ.

ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂವಿಧಾನದಲ್ಲೇ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಿನಲ್ಲಿ ಸೇರಿಸಿರು ವುದರಿಂದ ಪ್ರತೀ ಮಗು ಶಿಕ್ಷಣ ಪಡೆಯುವುದು ಕಾನೂನು ಬದ್ಧ ಪ್ರಕ್ರಿಯೆ. ಹುಟ್ಟಿನಿಂದ 14 ವರ್ಷದವರೆಗೆ ಸರಕಾರದ ಒಂದಲ್ಲಾ ಒಂದು ಯೋಜನೆ ಮಗುವಿಗೆ ನೆರವಾಗುತ್ತದೆ. ಸುಪ್ರೀಂ ಕೋರ್ಟನ ಆದೇಶದಂತೆ ಪ್ರತೀ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ರಚಿಸಲಾಗಿದೆ. ಇದಕ್ಕೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿರುವುದರಿಂದ ಪೊಲೀಸ್ ಅಧಿಕಾರಿಗಳು ಆದೇಶವನ್ನು ಪಾಲಿಸಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿಯಿಂದ ಮಕ್ಕಳ ವಿಚಾರಕ್ಕೆ ಸಂಬಂಧಿಸಿ ನಡೆಯುವಂತಹ ಕಾರ್ಯಕ್ರಮಗಳು ಸರಕಾರದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದೇ ಮಾಧ್ಯಮದವರು ಮಾಹಿತಿ ನೀಡಬೇಕು. ಯಾವುದೇ ಅಪರಿಚಿತ ಮಗು ಸಿಕ್ಕಾಗ ಆ ಮಗುವಿನ ಕುರಿತು ಬರೆಯಲು ವಿಶೇಷ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂದು ನಿಂಬರಗಿ ನುಡಿದರು.

ಪ್ರತೀ ಜಿಲ್ಲೆಯಲ್ಲಿ ಒನ್‌ಸ್ಟಾಪ್ ಸೆಂಟರ್ ತೆರೆಯಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಇದರಂತೆ ಸಂತ್ರಸ್ತರಿಗೆ ಒಂದೇ ಕಡೆ ಮೆಡಿಕಲ್, ಸೈಕಿಯಾಟ್ರಿಸ್ಟ್, ಕೌನ್ಸಿಲಿಂಗ್, ವೀಡಿಯೋ ಕಾನ್ಫರೆನ್ಸ್ ಮೂಲಕ 164 ಹೇಳಿಕೆ ಪಡೆಯುವ ಸೌಲಭ್ಯ ದೊರೆಯಲಿದೆ. ಮಕ್ಕಳು, ಮಹಿಳೆ ನಾಪತ್ತೆ ಅಥವಾ ಪತ್ತೆಯಾದ ಪ್ರಕರಣದಲ್ಲಿ ಮಾಧ್ಯಮಗಳು ಭಾವಚಿತ್ರ ಪ್ರಕಟಿಸಲು ನ್ಯಾಯಾಲಯದ ಅನುಮತಿ ಪಡೆಯಬೇಕು. ಸಂದಿಗ್ಧ ಸಿನೆಮಾ ಸಿಡಿ ಮಾಡಿ ಕೊಟ್ಟರೆ ಜಿಲ್ಲೆಯ 700 ಬೀಟ್ ಸಿಬ್ಬಂದಿಗೂ ವಿತರಿಸಿ, ಗ್ರಾಮಮಟ್ಟದಲ್ಲಿ ಪ್ರದರ್ಶಿಸಲಾಗುವುದು ಎಂದರು.

ಫೋಕ್ಸೋ ವಿಶೇಷ ಕೋರ್ಟ್ ಇಲ್ಲ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಡಾ.ವನಿತಾ ಎನ್. ತೊರವಿ ಮಾತನಾಡಿ, ಯಾದಗಿರಿ, ಉಡುಪಿ, ಕಾರವಾರ ಜಿಲ್ಲೆಯಲ್ಲಿ ಫೋಕ್ಸೋ ವಿಶೇಷ ನ್ಯಾಯಾಲಯಗಳಿಲ್ಲ. ಇದರಿಂದ ಮಹಿಳಾ ದೌರ್ಜನ್ಯ ಕೇಸ್‌ಗಳು ಶೀಘ್ರದಲ್ಲಿ ಇತ್ಯರ್ಥವಾಗುತ್ತಿಲ್ಲ. ಜಿಲ್ಲೆಯಲ್ಲಿ 2013ರಲ್ಲಿ ದಾಖಲಾದ ಪ್ರಕರಣ ಇಂದಿಗೂ ವಿಚಾರಣೆ ಹಂತದಲ್ಲಿದೆ. ರಾಜ್ಯಮಟ್ಟದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಬಾಲನ್ಯಾಯ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಶುಭ, ಸಂದಿಗ್ಧ ಸಿನೆಮಾ ನಿರ್ಮಾಪಕ, ನಟ ಸುಚೇಂದ್ರ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಮಕ್ಕಳ ಕಲ್ಯಾಣ ಸಮಿತಿಯ ಮೋಹನ್ ಸಾಲಿಕೇರಿ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಸ್ವಾಗತಿಸಿ, ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News