ಉಡುಪಿ: ಸಚಿವೆ ಜಯಮಾಲರಿಂದ 7.5 ಕೋಟಿರೂ. ವೆಚ್ಚದ ಕಾಮಗಾರಿ ಉದ್ಘಾಟನೆ
ಉಡುಪಿ, ಜ.24: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ 3ನೇ ಹಂತದಲ್ಲಿ ಬಿಡುಗಡೆಯಾದ ಅನುದಾನದ 7.5 ಕೋಟಿ ರೂ. ವೆಚ್ದದಲ್ಲಿ ಪೂರ್ಣಗೊಂಡ 13 ವಿವಿಧ ಕಾಮಗಾರಿಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಗುರುವಾರ ಉದ್ಘಾಟಿಸಿದರು.
ಕುಕ್ಕುಂಜೆ ವಾರ್ಡಿನ ಸಂತೋಷ್‌ನಗರ ಗರಡಿ ರಸ್ತೆ ಕಾಂಕ್ರೀಟಿಕರಣ ಮತ್ತು ಚರಂಡಿ ನಿರ್ಮಾಣ (70 ಲಕ್ಷ ರೂ.), ಗೋಪಾಲಪುರ ವಾರ್ಡಿನ 4ನೇ ಅಡ್ಡ ರಸ್ತೆಯಿಂದ 1ನೇ ಅಡ್ಡರಸ್ತೆಗೆ ಸಂಪರ್ಕ ರಸ್ತೆ ನಿರ್ಮಾಣ (50ಲಕ್ಷ), ನಿಟ್ಟೂರು ವಾರ್ಡಿನ ಹನುಮಂತನಗರದ ರಸ್ತೆ ಕಾಮಗಾರಿ, ರಾಮಕೃಷ್ಣ ನಗರದ ರಸ್ತೆಗೆ ಚರಂಡಿ ನಿರ್ಮಿಸಿ, ಕಾಂಕ್ರಿಟೀಕರಣ (50 ಲಕ್ಷ), ಕೊಡಂಕೂರು ಆಭರಣ ಮೋಟಾರ್ಸ್‌ನಿಂದ ಮೂಡುಬೆಟ್ಟು ಮಧ್ವನಗರದವರೆಗೆ ರಸ್ತೆ ಅಗಲೀಕರಣ, ಡಾಂಬರೀಕರಣ (50), ಕೊಡವೂರು ವಾರ್ಡಿನ ಲಕ್ಷ್ಮೀನಗರ ಗರ್ಡೆ ಎಸ್.ಟಿ ಕಾಲನಿ ರಸ್ತೆಗೆ ಚರಂಡಿ ನಿರ್ಮಿಸಿ ಕಾಂಕ್ರಿಟೀಕರಣ (50), ಕೊಡವೂರು ಕೊಪ್ಪಲ ತೋಟದಿಂದ ಕೊಡವೂರು ಮುಖ್ಯ ರಸ್ತೆಯ ಭಾಗಶ: ಕಾಂಕ್ರಿಟೀಕರಣ (75) ಮುಂತಾದ 13 ಕಾವುಗಾರಿಗಳನ್ನು ಸಚಿವೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಜಯಮಾಲ, ಉಡುಪಿ ಜಿಲ್ಲೆ ಸಾಂಸ್ಕೃತಿಕ ಮತ್ತು ಸಾರಸ್ವತ ಲೋಕಕ್ಕೆ ಪ್ರಸಿದ್ದವಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ರಸ್ತೆ ಸೌಕರ್ಯಗಳಿವೆ. ಇಲ್ಲಿನ ಜನತೆ ಪ್ರಜ್ಞಾವಂತರಾಗಿದ್ದು ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಜನಪ್ರತಿನಿಧಿ ಗಳನ್ನು ನಿರಂತರ ಪ್ರಶ್ನಿಸುವ ಕಾರಣ ಜನಪ್ರತಿನಿಗಳು ಸರಕಾರದಿಂದ ಅನುದಾನ ತಂದು ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಸಾರ್ವಜನಿಕರ ಈ ಗುಣ ನಾಡಿನ ಎಲ್ಲೆಡೆ ಕಂಡುಬಂದಲ್ಲಿ ಅಭಿವೃಧ್ದಿಯಲ್ಲಿ ಎಲ್ಲೆಡೆ ನಿರೀಕ್ಷಿತ ಬದಲಾವಣೆ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭ, ಪೌರಾಯುಕ್ತ ಆನಂದ ಕಲ್ಲೋಳಿಕರ್, ನಗರಸಭೆಯ ಇಂಜಿನಿಯರ್ ಗಣೇಶ್, ಮಾಜಿ ನಗರಸಬಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮತ್ತಿತರರು ಉಪಸ್ಥಿತರಿದ್ದರು.