ಉಡುಪಿ ಜಿಲ್ಲೆಯಲ್ಲಿ ಮತ್ತೆ ಏಳು ಮಂಗಗಳ ಶವ ಪತ್ತೆ
ಉಡುಪಿ, ಜ.24: ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ ಸತ್ತ ಏಳು ಮಂಗಗಳ ಮೃತ ದೇಹ ಪತ್ತೆಯಾಗಿದ್ದು, ಇವುಗಳಲ್ಲಿ ಎರಡರ ಪೋಸ್ಟ್ ಮಾರ್ಟಂ ನಡೆಸಿ, ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗ ಮತ್ತು ಮಣಿಪಾಲ ಪ್ರಯೋಗಾಲಯ ಗಳಿಗೆ ಕಳುಹಿಸಲಾಗಿದೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇಂದು ಕುಂದಾಪುರ ತಾಲೂಕಿನಲ್ಲಿ ಆರು- ಗಂಗೊಳ್ಳಿಯ ತಲ್ಲೂರು, ಬಿದ್ಕಲ್‌ಕಟ್ಟೆಯ ಮುಂಡಾಡಿ ಮತ್ತು ಹರ್ಲಾಡಿ, ಕಂಡ್ಲೂರಿನ ಕಾವ್ರಾಡಿ, ಬೆಳ್ವೆಯ ಬೆಳ್ವೆ ಮತ್ತು ಶೇಡಿಮನೆ- ಹಾಗೂ ಉಡುಪಿ ತಾಲೂಕಿನ ಕುಕ್ಕೆಹಳ್ಳಿಗಳಲ್ಲಿ ಈ ಕಳೇಬರ ಪತ್ತೆಯಾಗಿವೆ. ಇವುಗಳಲ್ಲಿ ತಲ್ಲೂರು ಮತ್ತು ಕುಕ್ಕೆಹಳ್ಳಿಗಳಲ್ಲಿ ಸಿಕ್ಕಿದ ಮಂಗನ ಪೋಸ್ಟ್‌ಮಾರ್ಟಂ ನಡೆಸಲಾಗಿದೆ ಎಂದರು.
ನಿನ್ನೆ ಪೋಸ್ಟ್‌ಮಾರ್ಟಂ ಮಾಡಿದ ಎರಡು ಮಂಗಗಳ ವಿಸೇರಾದ ವರದಿ ಬಂದಿದ್ದು, ಎರಡಲ್ಲೂ ಕೆಎಫ್‌ಡಿ ವೈರಸ್ ಪತ್ತೆಯಾಗಿಲ್ಲ ಎಂದವರು ಹೇಳಿದರು. ಈ ಮೂಲಕ ಇದುವರೆಗೆ ವಿಸೇರಾ ಕಳುಹಿಸಿದ 28 ಮಂಗಗಳಲ್ಲಿ 21ರ ವರದಿ ಬಂದಿದ್ದು, 12ರಲ್ಲಿ ವೈರಸ್ ಪತ್ತೆಯಾದರೆ, 9ರಲ್ಲಿ ಪತ್ತೆಯಾಗಿಲ್ಲ. ಇನ್ನು ಏಳರ ವರದಿ ಬರಬೇಕಾಗಿದೆ ಎಂದು ಡಾ.ಭಟ್ ತಿಳಿಸಿದರು.