×
Ad

ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣ: ಗೋವಾಕ್ಕೆ ತೆರಳಿದ ಮಲ್ಪೆ ಮೀನುಗಾರರಿಗೆ ಸಿಗದ ಸಫಲತೆ

Update: 2019-01-24 22:14 IST

ಉಡುಪಿ, ಜ.24: ಗೋವಾ ರಾಜ್ಯದ ಬೇತುಲ್‌ನಲ್ಲಿ ಸಮುದ್ರದ ಆಳದಿಂದ ಡೀಸೆಲ್ ಪತ್ತೆಯಾಗಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸುದ್ದಿಯ ಬೆನ್ನತ್ತಿ, ಗೋವಾಕ್ಕೆ ತೆರಳಿದ ಮಲ್ಪೆಯ ಸುಮಾರು 100ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳು ಯಾವುದೇ ಸಫಲತೆ ಸಿಗದೇ ಅಲ್ಲಿಂದ ಮರಳಿವೆ.

ಜ.22ರಂದು ಸ್ಥಳೀಯ ಪೊಲೀಸರ ತಂಡವೊಂದು ಅಲ್ಲಿಗೆ ತೆರಳಿ ಶೋಧನೆ ನಡೆಸಿದ್ದು, ಅವರಿಗೆ ಡೀಸೆಲ್ ಯಾವುದೇ ಕುರುಹು ಸಿಗದೇ ಬರಿಗೈಲಿ ಮರಳಿದ್ದರು. ಆಗ ಮಲ್ಪೆಯ ಮೀನುಗಾರರು ತಾವೇ ಪರಿಶೀಲನೆ ನಡೆಸಲು 100ಕ್ಕೂ ಅಧಿಕ ಬೋಟುಗಳೊಂದಿಗೆ ಗೋವಾ ಸಮುದ್ರದ ಬೇತುಲ್, ಮಾಲ್ವಾನ್ ಪ್ರದೇಶಕ್ಕೆ ತೆರಳಿದ್ದರು.

ತಮ್ಮಲ್ಲಿರುವ ಬಲೆ, ಆ್ಯಂಕರ್‌ಗಳನ್ನು ಬಳಸಿ ಇವರು ಸಮುದ್ರದ ಸಾಕಷ್ಟು ಆಳದಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗದೆ ನಿರಾಶೆಯಿಂದ ಹಿಂದಕ್ಕೆ ಬಂದಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ತ್ರೀಡಿ ಮ್ಯಾಪಿಂಗ್: ಈ ನಡುವೆ ಗೋವಾದ ಮಲ್ವಾನ್ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ನೌಕಾ ಪಡೆಯ ಹಡಗಿಗೆ ದೊಡ್ಡ ಗಾತ್ರದ ಅವಶೇಷಗಳು ಪತ್ತೆಯಾಗಿರುವುದು ನಿಜ ಎಂದು ಪೊಲೀಸ್ ಮೂಲವೊಂದು ದೃಢೀಕರಿಸಿದೆ. ಸೋನಾರ್ ತಂತ್ರಜ್ಞಾನ ಬಳಸಿ ಶೋಧ ನಡೆಸಿದಾಗ ಈ ಅವಶೇಷಗಳು ಸಾಕಷ್ಟು ಆಳದಲ್ಲಿ ಕಂಡುಬಂದಿದ್ದು,ಆದರೆ ಅದು ಸುವರ್ಣ ತ್ರಿಭುಜದ್ದೆ ಎಂಬ ಬಗ್ಗೆ ಯಾವುದೇ ಖಚಿತವಾಗಿ ಗೊತ್ತಾಗಿಲ್ಲ ಎಂದು ಮೂಲ ತಿಳಿಸಿದೆ.

ಇದೀಗ ಈ ಭಾಗದ ಅವಶೇಷಗಳ ಸ್ಪಷ್ಟ ಚಿತ್ರಣಕ್ಕಾಗಿ ನೌಕಾಪಡೆಯ ಇನ್ನೊಂದು ಹಡಗಿನ ಮೂಲಕ ಇದರ ತ್ರೀಡಿ ಮ್ಯಾಪಿಂಗ್ ನಡೆಸಲು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಅವಶೇಷಗಳು ಇದಕ್ಕೆ ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News