ಉಡುಪಿ ನಗರಸಭೆಯಲ್ಲಿ ಅಕ್ರಮ: ನಷ್ಟ ವಸೂಲಿಗೆ ಕೋರ್ಟ್ ಆದೇಶ
ಉಡುಪಿ, ಜ.24: ನಗರಸಭೆಯಲ್ಲಿ 1996-97ರಿಂದ 2002-03 ರವರೆಗಿನ ಸಾಲಿನಲ್ಲಿ ನಡೆದ ದಾಸ್ತಾನು ಕೊಠಡಿ ಕಳವು, ನೀರು ಸರಭರಾಜು ಯೋಜನೆ ಅಕ್ರಮಕ್ಕೆ ಸಂಬಂಧಿಸಿ ನಗರಸಭೆ ಮಾಜಿ ಆಯುಕ್ತ ಸಿ.ಸಿ ಗೋವಿಂದ ರಾಜು ಹಾಗೂ ಇತರೆ ಅಧಿಕಾರಿಗಳ ವಿರುದ್ದ 16,00,244 ರೂ. ನಷ್ಟ ವಸೂಲಿಗೆ ಉಡುಪಿ ನ್ಯಾಯಾಲಯ ಆದೇಶ ನೀಡಿದೆ.
1996-97ರಿಂದ 2002-03ರ ಸಾಲಿನಲ್ಲಿ ನಗರಸಭೆಯ ದಾಸ್ತಾನು ಕೊಠಡಿಯಿಂದ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಬಗ್ಗೆ ಸಿಒಡಿ ತನಿಖೆ ನಡೆದು ವರದಿಯ ಪ್ರತಿಯನ್ನು 2011ರ ಜು.21ರಂದು ಮುಂದಿನ ಕ್ರಮಕ್ಕಾಗಿ ನಗರಸಭೆಗೆ ಸಲ್ಲಿಸಲಾಗಿತ್ತು.
ನೀರು ಸರಬರಾಜು ಕಾಮಗಾರಿಗೆ ಸಂಬಂಧಿಸಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದಿದ್ದರು. ನೀರು ಸರಬರಾಜು ಸಾಮಾಗ್ರಿಗಳ ಪೂರೈಕೆದಾರ ಕುಂದಾಪುರ ಜಯರಾಮ ಶೆಟ್ಟಿ ಅಕ್ರಮದಲ್ಲಿ ಶಾಮೀಲಾಗಿದ್ದರು. ಇವರೊಂದಿಗೆ ಅಂದಿನ ನಗರಸಭೆ ಪೌರಾಯುಕ್ತ ಸಿ.ಸಿ ಗೋವಿಂದರಾಜು(ಮೃತಪಟ್ಟಿದ್ದಾರೆ). ಕಿರಿಯ ಅಭಿಯಂತರ ಎ.ವಿ ಆನಂದ ಮತ್ತು ಟಿ.ಸಿ ಅಂಕೇಗೌಡ, ಡಿ.ಬಸಪ್ಪ, ಬಿ.ನಾರಾಯಣ, ಸಹಾಯಕ ಭಾಷಾ ಸಾಹೇಬ್ ಅಕ್ರಮದಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಿಂದ ದೋಷಿ ಗಳೆಂದು ಗುರುತಿಸಲ್ಪಟ್ಟಿದ್ದಾರೆ.
ನಗರಸಭೆ ತನ್ನ ಲೆಕ್ಕಪರಿಶೋಧನಾ ವರದಿ ಜತೆಗೆ ಸಿಒಡಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 16,00,244 ರೂ. ನಷ್ಟಕ್ಕೆ 2009 ಜು.10ರಿಂದ ಶೇ.6 ರೂ ಬಡ್ಡಿ ಸಹಿತ ಎಲ್ಲಾ ಆರೋಪಿಗಳು ಹಣವನ್ನು ಪಾವತಿಸಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿವೇಕಾನಂದ ಪಂಡಿತ್ ಜ.18ರಂದು ತೀರ್ಪು ನೀಡಿದ್ದಾರೆ. ನಗರಸಭೆ ಪರವಾಗಿ ಎನ್.ಕೃಷ್ಣರಾಜ ಆಚಾರ್ಯ ವಾದ ಮಂಡಿಸಿದ್ದರು.