×
Ad

‘ವಯೋವೃದ್ಧರಾದಂತೆ ಕೆಲಸದ ಹುಮ್ಮಸ್ಸು ಹೆಚ್ಚುತ್ತದೆ’

Update: 2019-01-24 23:27 IST

ಮಂಗಳೂರು, ಜ.24: ಕಾಯಿಲೆ ಇಲ್ಲದಿದ್ದರೆ ಮಾತ್ರ ಆರೋಗ್ಯವಂತರು ಎನ್ನುವ ಕಲ್ಪನೆ ತಪ್ಪು. ಮನಸ್ಸಿಗೆ ಕೆಲಸ ಮಾಡುವ ಹುರುಪು ಇದ್ದವರನ್ನು ಆರೋಗ್ಯವಂತರು ಎನ್ನಬಹುದು. ಮಾನವನಿಗೆ 80 ವರ್ಷ ದಾಟಿದ ಬಳಿಕ ಕೆಲಸ ಮಾಡುವ ಉತ್ಸಾಹ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಾಣಕ್ಕೆ ಪುತ್ತೂರಿನ ಶಾಂತಿಗೋಡು ಬಳಿ ನಿರ್ಮಾಣಗೊಂಡ ನವಚೇತನ ಹಿರಿಯ ನಾಗರಿಕರ ಬಡಾವಣೆ ಉತ್ತಮ ಯೋಚನೆ ಎಂದು ಮಾಹೆ ನಿವೃತ್ತ ಕುಲಪತಿ ಡಾ.ಬಿ.ಎಂ. ಹೆಗ್ಡೆ ಹೇಳಿದರು.

ಪುತ್ತೂರಿನ ಶಾಂತಿಗೋಡು ಬಳಿ ನವಚೇತನ ರಿಟೈರ್‌ಮೆಂಟ್ ರೆಸಿಡೆನ್ಸಿ ವತಿಯಿಂದ ರೂಪುಗೊಂಡ ನವಚೇತನ ಹಿರಿಯ ನಾಗರಿಕರ ಬಡಾವಣೆ ಲೋಕಾರ್ಪಣೆ ಅಂಗವಾಗಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಗುರುವಾರ ನಡೆದ ‘ನಿವೃತ್ತಿಯ ನಂತರದ ಜೀವನ’ ವಿಚಾರ ಸಂಕಿರಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ದೇಹವೇ ಮನಸ್ಸು. ಮನಸ್ಸೇ ದೇಹ. ಮಾನವನಿಗೆ ಮನಸ್ಸಿನ ಆರೋಗ್ಯ ಮುಖ್ಯ. ಮನಸ್ಸು ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ. ಮನಸ್ಸಿನ ಆರೋಗ್ಯ ಎಲ್ಲ ಕೆಲಸ ಮಾಡಲು ಹುರುಪು ನೀಡುತ್ತದೆ. ಇತರರನ್ನು ಪ್ರೀತಿ ಮಾಡುವ ಹುರುಪು ನಮಗೆ ಸದಾ ಇರಬೇಕು. ಅದಕ್ಕಾಗಿ ನಿವೃತ್ತಿನ ನಂತರವೂ ನಾವು ಇತರರಿಗೆ ನೆರವು, ಸಹಾಯ ಮಾಡಬೇಕು. ಇನ್ನೊಬ್ಬರಿಗೆ ಮಾಡಿದ ಸಹಾಯದ ಆತ್ಮತೃಪ್ತಿ ನಮ್ಮನ್ನು ಆರೋಗ್ಯವಂತರ ನ್ನಾಗಿರಿಸುತ್ತದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ ವಿ. ವಿ. ಭಟ್, ನಿವೃತ್ತಿಯ ನಂತರ ಏನು ಎಂಬ ಪ್ರಶ್ನೆ ಎಲ್ಲ ಉದ್ಯೋಗಿಗಳಲ್ಲಿಯೂ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ನೆಮ್ಮದಿಯ ಜೀವನಕ್ಕೆ ಪೂರಕವಾದ ವ್ಯವಸ್ಥೆ ಇರುವ ನವಚೇತನ ಹಿರಿಯ ನಾಗರಿಕರ ಬಡಾವಣೆ ರೂಪು ಗೊಂಡಿದೆ ಎಂದರು.

ವೃದ್ಧರಾದ ಬಳಿಕ ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವೂ ಮುಖ್ಯ. ಆಹಾರದಲ್ಲಿ ಶಿಸ್ತು, ಯುಕ್ತ ಆಹಾರ ಮತ್ತು ವಿಹಾರದ ಮೂಲಕ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಸಮಾಜಕ್ಕೆ ಉಪಕಾರಿ ಆಗಿ ಹಿರಿಯ ನಾಗರಿಕರು ಜೀವನ ನಡೆಸಬೇಕು ಎಂದರು.

ನವಚೇತನ ರಿಟೈರ್‌ಮೆಂಟ್ ರೆಸಿಡೆನ್ಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಶ್ಯಾಮ ಭಟ್ ಮಾತನಾಡಿ, ವಿದ್ಯಾಭ್ಯಾಸದ ಬಳಿಕ ಅನೇಕ ವರ್ಷಗಳ ಕಾಲ ಉದ್ಯೋಗ ನಿಮಿತ್ತ ಅಮೆರಿಕಾದಲ್ಲಿ ವಾಸವಿದ್ದ ನಾನು, ಅಲ್ಲಿನ ಹಿರಿಯ ನಾಗರಿಕರು ಹಾಗೂ ಹಿರಿಯ ನಾಗರಿಕರ ಬಡಾವಣೆಯ ವಿಶ್ಲೇಷಣೆ ನಡೆಸಿದ್ದೆ. ಅಮೆರಿಕಾ ಮಾದರಿಯ ಹಿರಿಯ ನಾಗರಿಕರ ಬಡಾವಣೆಯನ್ನು ಭಾರತೀಯ ಸಂಸ್ಕೃತಿಗೆ ಸರಿಹೊಂದುವಂತೆ ನಿರ್ಮಿಸುವ ಕನಸಿತ್ತು. ಆಧುನಿಕ ಜೀವನ ಶೈಲಿ, ಯುವಜನತೆಯಲ್ಲಿ ಆರ್ಥಿಕ ಸ್ವಾತಂತ್ರ್ಯದಿಂದ ಭಾರತದ ಹಳ್ಳಿಗಳೂ ವೃದ್ಧಾಶ್ರಮಗಳಾಗುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News