ಉದ್ಯಮಿ ಕೃಷ್ಣ ಅವತಾರ್ ಜಲನ್ ನಿಧನ
ಮಂಗಳೂರು, ಜ.24: ಮಂಗಳೂರಿನ ಪ್ರಖ್ಯಾತ ಉದ್ಯಮಿ ಹಾಗೂ ಮಂಗಳೂರು ಷೇರು ವಿನಿಮಯದ ಮಾಜಿ ಅಧ್ಯಕ್ಷ ಕೃಷ್ಣ ಅವತಾರ್ ಜಲನ್ (78) ನಗರದ ಕೋಡಿಯಾಲ್‌ಗುತ್ತುವಿನ ಸ್ವಗೃಹದಲ್ಲಿ ಗುರುವಾರ ನಿಧನರಾದರು.
ಕೃಷ್ಣ ಅವತಾರ್ ಜಲನ್ ಅವರು ಮಂಗಳೂರಿನ ಯಶಸ್ವಿ ಉದ್ಯಮಿಯಾಗಿದ್ದು, ವಿಷ್ಣು ಟ್ರಾನ್ಸ್‌ಪೋರ್ಟ್ ಲಾಜಿಸ್ಟಿಕ್ ಕಂಪೆನಿ ಹಾಗೂ ವಿಷ್ಣು ಎಂಟರ್‌ಪ್ರೈಸಸ್‌ನ್ನು ಆರಂಭಿಸಿದ್ದರು. ಜೊತೆಗೆ ಇಂಡಿಯನ್ ಆಯಿಲ್ ಡೀಲರ್‌ಆಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ರೋಟರಿ ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆಯನ್ನು ಮುಂದುವರಿಸಿದ ಕೃಷ್ಣ ಅವತಾರ್ ಜಲನ್, ‘ಸರ್ವೀಸ್ ಅಬೋವ್ ಸೆಲ್ಫ್ ಅವಾರ್ಡ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ರಾಜಸ್ಥಾನಿ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಕೃಷ್ಣ ಅವತಾರ್ ಜಲನ್, ‘ರಾಜಸ್ಥಾನ್ ಸಭಾ’ ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ‘ದಿವ್ಯಶಕ್ತಿ ಧಾಮ’ದ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.