×
Ad

ರಸ್ತೆ ನಿಯಮ ಪಾಲನೆ ಅಗತ್ಯ: ಡಿಸಿ ಸಸಿಕಾಂತ್ ಸೆಂಥಿಲ್

Update: 2019-01-25 20:05 IST

ಮಂಗಳೂರು, ಜ.25: ವಾಹನವನ್ನು ಚಾಲನೆ ಮಾಡುವಾಗ ರಸ್ತೆ ನಿಯಮಗಳನ್ನು ಪಾಲಿಸಿದರೆ ಯಾವುದೇ ಅಪಘಾತಗಳಾಗುವುದಿಲ್ಲ. ಇದಕ್ಕೆ ಸ್ವಯಂ ಜಾಗೃತಿ ಅಗತ್ಯ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡುತ್ತಿದ್ದರು.

ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ‘ಸಡಕ್ ಸುರಕ್ಷಾ-ಜೀವನ ರಕ್ಷಾ’ ಎಂಬ ಧ್ಯೇಯದೊಂದಿಗೆ ಫೆ.4ರಿಂದ 10ರವರೆಗೆ ಏರ್ಪಡಿಸಲಾಗುವುದು. ವಾಹನ ಚಲಾವಣೆ ಸಮಯದಲ್ಲಿ ಸೀಟ್‌ಬೆಲ್ಟ್ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಅಗತ್ಯತೆ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟಿಸಲಾಗುವುದು ಹಾಗೂ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಕುರಿತು ಅರಿವು ನೀಡಲಾಗುವುದು. ವಾಹನ ಚಾಲನಾ ತರಬೇತಿ ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದ ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಪಿ ಗಂಗಾಧರ್ ಮಾತನಾಡಿ, 2ನೇ ದಿನದಿಂದ 7ನೇ ದಿನದವರೆಗೂ ಶಾಲಾ ಮಕ್ಕಳಿಗೆ ಸ್ಲೋಗನ್ ಹಾಗೂ ಬಿತ್ತಿಪತ್ರ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. 18 ವರ್ಷದಿಂದ ಕೆಳಗಿನ ಮಕ್ಕಳು ವಾಹನ ಚಲಾವಣೆ ಮಾಡದಂತೆ ಪಾಲಕರು ಗಮನ ಹರಿಸಬೇಕು ಎಂದು ತಿಳಿಸಿದರು.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಜಾಗೃತಿ ಸಿಟಿ ಕೌನ್ಸಿಲ್ ತರಬೇತುದಾರ ಭುಜಂಗ ಶೆಟ್ಟಿ ಹಾಗೂ ಎಲ್ಲ ಇಲಾಖಾಧಿಕಾರಿ ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News