ಲಿಂಟಲ್ ಬಿದ್ದು ವಿದ್ಯಾರ್ಥಿ ಮೃತ್ಯು ಪ್ರಕರಣ: ಪಾವತಿಯಾಗದ ಪರಿಹಾರ; ಡಿಸಿ ವಾಹನ, ಸೊತ್ತು ಜಪ್ತಿಗೆ ಆದೇಶ
ಪುತ್ತೂರು, ಜ. 25: 9 ವರ್ಷಗಳ ಹಿಂದೆ ಪುತ್ತೂರಿನ ಕಬಕ ವಿದ್ಯಾಪುರ ಎಂಬಲ್ಲಿನ ಸರ್ಕಾರಿ ಶಾಲೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಕ್ಷರ ದಾಸೋಹ ಕಟ್ಟಡದ ಲಿಂಟಲ್ ಕುಸಿದು ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿ ಮೃತರ ಕುಟುಂಬಸ್ಥರಿಗೆ ಪರಿಹಾರ ಒದಗಿಸುವಂತೆ ನ್ಯಾಯಾಲಯ ನೀಡಿದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಗಳ ವಾಹನ ಮತ್ತು ಕಚೇರಿಯ ಚರ ಸೊತ್ತುಗಳನ್ನು ಜಪ್ತಿ ಮಾಡುವಂತೆ ಪುತ್ತೂರು ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.
2010 ಮಾ. 4ರಂದು ವಿದ್ಯಾಪುರ ಸರ್ಕಾರಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಶಾರುಖ್ ಖಾನ್(14) ಎಂಬವರ ತಲೆಯ ಮೇಲೆ ಕಟ್ಟಡದ ಲಿಂಟಲ್ ಕುಸಿದು ಬಿದ್ದು ಮೃತಪಟ್ಟಿದ್ದರು. ಈ ಬಗ್ಗೆ ಬಾಲಕನ ತಂದೆ ಅಬ್ದುಲ್ ಖಾದರ್ ಸರ್ಕಾರಿ ಶಾಲೆ ಮತ್ತು ಕಟ್ಟಡ ನಿರ್ಮಾಣದ ಗುತ್ತಿಗೆದಾರರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ಪರಿಹಾರ ಕೋರಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ್ದ ಪುತ್ತೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಬಾಲಕನ ಹೆತ್ತವರಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಅದೇಶದ ವಿರುದ್ಧ ಸರ್ಕಾರ ಮತ್ತು ಗುತ್ತಿಗೆದಾರ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರು. ಗುತ್ತಿಗೆದಾರರ ಅಪೀಲನ್ನು ನ್ಯಾಯಾಲಯ ಮಾನ್ಯ ಮಾಡಿತ್ತು. ಆದರೆ ಸರ್ಕಾರದ ಪರ ಸಲ್ಲಿಸಲಾಗಿದ್ದ ಅಪೀಲನ್ನು ವಜಾಗೊಳಿಸಿ ಸೂಚಿತ ಪರಿಹಾರವನ್ನು ಬಡ್ಡಿ ಸಮೇತವಾಗಿ ಪಾವತಿಸುವಂತೆ ಸೂಚಿಸಿತ್ತು.
ಸರ್ಕಾರ ತೀರ್ಪು ನೀಡಿ 8 ತಿಂಗಳು ಕಳೆದರೂ ಸರ್ಕಾರದಿಂದ ಪರಿಹಾರ ಮೊತ್ತ ಬಿಡುಗಡೆಯಾಗದ ಕಾರಣ ಅರ್ಜಿದಾರರು ಅಮಲ್ಜಾರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ದ.ಕ. ಜಿಲ್ಲಾಧಿಕಾರಿಗಳು ಬಳಸುವ ವಾಹನ ಮತ್ತು ಕಚೇರಿಯ ಸೊತ್ತುಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಅರುಣ್ ಬಿ.ಕೆ ಮತ್ತು ಮಂಗಳೂರಿನ ಇಬ್ರಾಹಿಂ ಕೆ.ಎಸ್ ವಾದಿಸಿದ್ದರು.